ಮೈಸೂರು:ದೇಶದ ಭವಿಷ್ಯದ ಬಗ್ಗೆ ಚಿಂತಿಸದ, ಯಾವುದೇ ದೂರದೃಷ್ಟಿ ಇಲ್ಲದ ನಾಯಕರು ನಮ್ಮನ್ನು ಆಳುತ್ತಿರುವುದು ದೊಡ್ಡ ದುರಂತ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ತಿಳಿಸಿದರು.
ಭಾರತ ಮೂಲನಿವಾಸಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ‘ಬುದ್ಧ ದರ್ಶನ’ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಬುದ್ಧಿಹೀನ ಮತ್ತು ಮಾನವೀಯತೆ ಇಲ್ಲದ ಮನೆಹಾಳು ನಾಯಕರು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಈ ದೇಶದ ಆಡಳಿತ, ಭ್ರಷ್ಟರು ಹಾಗೂ ಕೋಮುವಾದಿಗಳ ಕೈಯಲ್ಲಿದ್ದು, ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವವನ್ನು ಜಗತ್ತಿಗೆ ಮೊದಲಿಗೆ ಹೇಳಿಕೊಟ್ಟದ್ದು ಬುದ್ಧ. ಆ ಬಳಿಕ ಬಂದ ಬಸವೇಶ್ವರರು ಮತ್ತು ಅಂಬೇಡ್ಕರ್ ಅದೇ ಮಾನವೀಯತೆ ಸಂದೇಶ ಸಾರಿದರು. ಆದರೆ ಇಂದು ನಮ್ಮ ದೇಶದಲ್ಲಿ ರಾಜ್ಯಧರ್ಮ ಇಲ್ಲ. ತೋಳ್ಬಲ, ಹಣ ಬಲ ರಾರಾಜಿಸುತ್ತಿದೆ. ಹಿಂದೂ ಧರ್ಮವನ್ನು ಹೊರತುಪಡಿಸಿ ಇತರ ಎಲ್ಲ ಧರ್ಮಗಳು ಸಮಾನತೆಯ ಸಂದೇಶವನ್ನು ಸಾರಿವೆ. ಹಿಂದೂ ಧರ್ಮದಲ್ಲಿರುವ ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್ ಪ್ರಯತ್ನಿಸಿದರಾದರೂ, ಯಶಸ್ಸು ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮ ಇರುವುದು ದಮನಗೊಳಿಸಲು ಅಲ್ಲ. ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಧರ್ಮದ ಉದ್ದೇಶವಾಗಿರಬೇಕು ಎಂದು ಕಿವಿಮಾತು ಹೇಳಿದರು.