ಮೈಸೂರು : ಚಾಮರಾಜನಗರದ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಯೋಗೀಶ್ ಉಪ್ಪಾರ ಮನವಿ ಮಾಡಿದರು. ರಾಜ್ಯಾದ್ಯಂತ 25 ರಿಂದ 30 ಲಕ್ಷ ಜನಸಂಖ್ಯೆ ಇರುವ ಉಪ್ಪಾರ ಸಮುದಾಯವು ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಸಮಾಜದ ಏಕೈಕ ಶಾಸಕರಾಗಿ ಪುಟ್ಟರಂಗಶೆಟ್ಟಿ ಆಯ್ಕೆಯಾಗಿದ್ದು, ಸೂಕ್ತ ಸ್ಥಾನಮಾನ ನೀಡಬೇಕು. ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಉಪ್ಪಾರ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ನೀಡಲಿಲ್ಲ. ನಾವೆಲ್ಲರೂ ಒಮ್ಮತದಿಂದ ಸಿದ್ದರಾಮಯ್ಯ ನೇತೃತ್ವ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೇವೆ. ಸಮಾಜದ ಮುಂಚೂಣಿ ನಾಯಕರನ್ನು ಗುರುತಿಸಿ ವಿಧಾನ ಪರಿಷತ್ ಸದಸ್ಯ ಸ್ಥಾನ ಹಾಗೂ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನಗಳನ್ನು ನೀಡಿ ಸಹಕರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಕನಕನಗರ ಮಹದೇವು, ಉಪಾಧ್ಯಕ್ಷ ಕರಳಾಪುರ ನಾಗರಾಜು, ಗೌರವ ಸಲಹೆಗಾರ ಚಂದ್ರಪ್ಪ, ನಿರ್ದೇಶಕರಾದ ಕುಡ್ಲಾಪುರ ಎಂ.ರಾಜು, ಮಲ್ಲೇಶ್,ಮುಖಂಡ ಸೋಮಶಂಕರ್ ಇದ್ದರು.
ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ :ಯಮನಕಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಮನವಿ ಮಾಡಿದರು. ಕಾಂಗ್ರೆಸ್ನಲ್ಲಿ ನಮ್ಮ ಸಮುದಾಯದಿಂದ 15 ಶಾಸಕರು ಆಯ್ಕೆಯಾಗಿದ್ದಾರೆ. ಶೇ 70 ರಷ್ಟು ಮತ ಚಲಾವಣೆ ಮಾಡಿ ಪಕ್ಷ ಅಧಿಕಾರಕ್ಕೇರಲು ಸಹಕರಿಸಿದ್ದಾರೆ ಎಂದು ಹೇಳಿದರು.
ನಾಯಕ ಜನಾಂಗವು ಹೆಚ್ಚಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತ ಚಲಾಯಿಸುತ್ತಾರೆ ಎಂದು ಅಪಪ್ರಚಾರ ನಡೆಸಿದರು. ಆದರೆ, ನಮ್ಮ ಸಮುದಾಯ ಈ ಬಾರಿ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದೆ. ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಯಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮುದಾಯ ವಿಶ್ವಾಸವಿಟ್ಟಿದ್ದು, ಅವರನ್ನು ಪರಿಗಣಿಸಲೇಬೇಕು. ಮೈಸೂರು ಭಾಗದಿಂದ ಆಯ್ಕೆಯಾದ ಸಮುದಾಯದ ಏಕೈಕ ಶಾಸಕ ಅನಿಲ್ ಚಿಕ್ಕಮಾದು ಅವರನ್ನೂ ಸೇರಿ, 4 ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಈ ಭಾಗದಿಂದ ಒಬ್ಬರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.