ಮೈಸೂರು: ಟಿ.ನರಸೀಪುರದ ಬಳಿಯ ಕುರುಬೂರು ಗ್ರಾಮದ ಹೆದ್ದಾರಿಯಲ್ಲಿ ಮೇ 29 (ಸೋಮವಾರ) ರಂದು ಖಾಸಗಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ ಇದೀಗ 11ಕ್ಕೆ ಏರಿಕೆಯಾಗಿದೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಟಿ.ನರಸೀಪುರದ ಬಳಿಯ ಕುರುಬೂರು ಗ್ರಾಮದ ಹೆದ್ದಾರಿಯಲ್ಲಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಅವತ್ತೇ ಮೈಸೂರಿನ ಕಾರು ಚಾಲಕ ಸೇರಿದಂತೆ ಬಳ್ಳಾರಿ ಮೂಲದ 9 ಜನ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಕೆಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದರಲ್ಲಿ ತಲೆಗೆ ಪೆಟ್ಟಾಗಿದ್ದ 45 ವರ್ಷದ ಸಂದೀಪ್ ಎಂಬ ಬಳ್ಳಾರಿ ಮೂಲದ ವ್ಯಕ್ತಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಸಂದೀಪ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನಿಬ್ಬರ (ಬಸ್ನಲ್ಲಿದ್ದವರು) ಚಿಕಿತ್ಸೆ ಮುಂದುವರೆದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೇ 27ರಂದು ಮೂರು ಕುಟುಂಬಗಳ 12 ಸದಸ್ಯರು ಪ್ರವಾಸಕ್ಕೆಂದು ಬಳ್ಳಾರಿಯಿಂದ ಮೈಸೂರಿಗೆ ಆಗಮಿಸಿದ್ದರು. ಮಲೆ ಮಾದೇಶ್ವರ ದರ್ಶನಕ್ಕೆ ಹೋಗಿ ಮೈಸೂರು ನಗರಕ್ಕೆ ವಾಪಸ್ ಆಗುತ್ತಿರುವ ವೇಳೆ ಈ ದುರಂತ ಸಂಭವಿಸಿತ್ತು. ಅಪಘಾತವಾದ ದಿನದಂದೇ ಸಂದೀಪ್ (24), ಕೊಟ್ರೇಶ್(45), ಸುಜಾತಾ (40) ಮಂಜುನಾಥ (35), ಪೂರ್ಣಿಮಾ(30), ರ್ತಿಕ್ (08), ಪವನ್ (10), ಗಾಯತ್ರಿ(35), ಶ್ರಾವ್ಯ(3) ಮೃತಪಟ್ಟಿದ್ದರು. ಇದೀಗ ಸಂದೀಪ್ (45) ಎಂಬಾತ ಕೂಡ ಮೃತಪಟ್ಟಿದ್ದಾರೆ.