ಮೈಸೂರು :ಭಾರತದ ಅತ್ಯುತ್ತಮ ಫುಟ್ಸಲ್ ಗೋಲ್ ಕೀಪರ್ ಆಗಬೇಕೆಂಬ ಗುರಿ ಹೊಂದಿದ್ದ ನಗರದ ಪ್ರತಿಭಾನ್ವಿತ ಯುವ ಕ್ರೀಡಾಪಟು ದೂರದ ಇಟಲಿ ದೇಶದ ರೋಮ್ ನಗರದಲ್ಲಿ ಸಾವಿಗೀಡಾಗಿದ್ದಾನೆ.
ಮೈಸೂರಿನ ಎನ್ ಆರ್ ಮೊಹಲ್ಲಾದ ನಿವಾಸಿ, ಕರಕುಶಲ ಕಲಾವಿದ ಎನ್.ಕುಮಾರ್ ಹಾಗೂ ಎನ್.ರೂಪಾ ಎಂಬ ದಂಪತಿ ಪುತ್ರ ಯಶವಂತ್ ಕುಮಾರ್(23) ಇಟಲಿಯಲ್ಲಿ ಮೃತಪಟ್ಟಿರುವ ಫುಟ್ಸಲ್ ಆಟಗಾರ.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ,`ಸೀರೀ ಬಿ ಫುಟ್ಸಲ್ ಲೀಗ್ನಲ್ಲಿ `ಕ್ಯಾಲ್ಸಿಯೊ ಸಿ 5 ತಂಡದೊಂದಿಗೆ ಭಾಗವಹಿಸಲು ಕಳೆದ 4 ತಿಂಗಳ ಹಿಂದೆಯಷ್ಟೇ ಇಟಲಿಗೆ ತೆರಳಿದ್ದ. ರೋಮ್ನಲ್ಲಿನ ಜಲಪಾತವೊಂದರಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ದೂರವಾಣಿಯಲ್ಲಿ ಯಶವಂತ ಕುಮಾರ್ ತಂದೆ ಎನ್.ಕುಮಾರ್ ಮಾತನಾಡಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ಮಗ ಯಶವಂತ್ ಕುಮಾರ್ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಾಗಾಗಿ, ತಂಡದ ಕ್ಯಾಪ್ಟನ್ಗೆ ಮೆಸೇಜ್ ಕಳುಹಿಸಿದ್ದೆವು. ಆದರೆ, ಆತ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದನ್ನು ಆ. 6ರಂದು ನಮಗೆ ತಿಳಿಸಿದ್ದರಾದರೂ ಖಚಿತಪಡಿಸಿರಲಿಲ್ಲ.
ಪೊಲೀಸರು ಮರುದಿನ ಬೆರಳಚ್ಚಿನ ಆಧಾರದಲ್ಲಿ ದೃಢಪಡಿಸಿದರು. ಆಗಸ್ಟ್ 31ರವರೆಗೂ ಅಲ್ಲಿಗೆ ವಿಮಾನ ಸೌಲಭ್ಯವಿಲ್ಲ. ಅಲ್ಲದೆ ಮೃತದೇಹವನ್ನು ಮೀನುಗಳು ತಿಂದಿರುವುದರಿಂದ ಕೊಳೆತ ಸ್ಥಿತಿ ತಲುಪಿದೆ. ಹಾಗಾಗಿ, ಅಲ್ಲಿರುವ ಕನ್ನಡಿಗರೇ ಅಂತ್ಯಕ್ರಿಯೆ ನೆರವೇರಿಸಿ, ಅಸ್ತಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಯಶವಂತ್ ರೋಚಕ ಕ್ರೀಡಾ ಹಾದಿ
ಫುಟ್ಬಾಲ್ ಮಾದರಿಯ ಫುಟ್ಸಲ್ ಕ್ರೀಡೆ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಫುಟ್ಬಾಲ್ ರೂಪಾಂತರ ಕ್ರೀಡೆ ಫುಟ್ಸಲ್ ಒಂದು ಒಳಾಂಗಣ ಕ್ರೀಡೆ. ಗೋಲ್ ಕೀಪರ್ ಸೇರಿ ಒಂದು ತಂಡದಲ್ಲಿ ಐವರು ಆಟಗಾರರು ಮಾತ್ರ ಇರುತ್ತಾರೆ. ಈ ವಿಶೇಷ ಕ್ರೀಡೆಯ ಬಗ್ಗೆ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಆಸಕ್ತಿ ಬೆಳೆಸಿಕೊಂಡಿದ್ದ ಯಶವಂತ್, ನಂತರದ ದಿನಗಳಲ್ಲಿ ತರಬೇತಿ ಪಡೆದಿದ್ದರು.