ಕರ್ನಾಟಕ

karnataka

ETV Bharat / state

ಏನೇ ಆದೇಶ ಬಂದರೂ ನಮ್ಮ ರೈತರ ಹಿತ ಕಾಪಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್ - ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ಸ್ ನೀರು

ಕಳೆದ ಮೂರು ದಿನಗಳಿಂದ ನಮ್ಮ ಅಣೆಕಟ್ಟೆಗೆ 8 ರಿಂದ 10 ಸಾವಿರ ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ನಮ್ಮ ರೈತರ ರಕ್ಷಣೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ದಸರಾ ಕ್ರೀಡಾಕೂಟದಲ್ಲಿ ಸಿಎಂ ಕಪ್​ಗೆ ಚಾಲನೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ದಸರಾ ಕ್ರೀಡಾಕೂಟದಲ್ಲಿ ಸಿಎಂ ಕಪ್​ಗೆ ಚಾಲನೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

By ETV Bharat Karnataka Team

Published : Oct 11, 2023, 8:31 PM IST

Updated : Oct 11, 2023, 10:45 PM IST

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಮೈಸೂರು : ಮತ್ತೆ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬ ಆದೇಶ ಬಂದಿದೆ. ನಾವು ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಏನೇ ಆದೇಶ ಬಂದರೂ ನಮ್ಮ ರೈತರ ಹಿತವನ್ನು ಕಾಪಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮೈಸೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ದಸರಾ ಕ್ರೀಡಾಕೂಟದ ಸಿಎಂ ಕಪ್​ಗೆ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಮತ್ತು ತಮಿಳುನಾಡಿನ ಡ್ಯಾಂಗಳಲ್ಲಿರುವ ನೀರಿನ ಕುರಿತು ದಾಖಲೆ ತೆಗೆದುಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ನಮ್ಮ ಅಣೆಕಟ್ಟೆಗೆ 8 ರಿಂದ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಲ್ಲಿ ನಾವು ನಮ್ಮ ರೈತರ ರಕ್ಷಣೆ ಮಾಡುತ್ತೇವೆ. ಬೆಂಗಳೂರು ಸುತ್ತಮುತ್ತ ಸತತ ಮಳೆಯಾಗಿದೆ. ಮಾಪನ ಕೇಂದ್ರ ಇರುವ ಬಿಳಿಗುಂಡಲು ಬಳಿ ನೀರು ಹೆಚ್ಚು ಹರಿದಿದ್ದು, ಕೊರತೆ ಸರಿದೂಗಿದೆ ಎಂದರು.

ಮೇಕೆದಾಟು ನಮ್ಮ ಮೊದಲ ಆದ್ಯತೆ:ಮೇಕೆದಾಟು ಯೋಜನೆ ಬಗ್ಗೆ ಸರ್ಕಾರದ ಸಿದ್ದತೆಗಳೇನು ಎಂಬ ಪ್ರಶ್ನೆಗೆ, ಮೇಕೆದಾಟು ಯೋಜನೆ ನಮ್ಮ ಮೊದಲ ಆದ್ಯತೆ. ನ್ಯಾಯಾಲಯದ ಮೆಟ್ಟಿಲೇರಲು ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ. ಈಗಾಗಲೇ ನ್ಯಾಯಾಲಯ ತಮಿಳುನಾಡಿಗೆ ಕರ್ನಾಟಕದವರು ಅವರ ರಾಜ್ಯದಲ್ಲಿ ಅಣೆಕಟ್ಟು ಕಟ್ಟಿದರೆ ನಿಮ್ಮ ತಕರಾರು ಇರಬಾರದು ಎಂದು ಅಭಿಪ್ರಾಯಪಟ್ಟಿದೆ.

ಹಾಗಾಗಿ ಮೇಕೆದಾಟು ಯೋಜನೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಯೋಜನೆಯಲ್ಲಿ ಬಳಸಲಾಗುವ ರೈತರ ಜಮೀನಿಗೆ ಬದಲಿ ಜಮೀನು ನೀಡುವ ಕುರಿತು ನಾವು ಈಗಾಗಲೇ ತಯಾರಿ ಮಾಡಿಕೊಂಡಿದ್ದೇವೆ. ಅದು ನಮ್ಮ ಆಂತರಿಕ ವಿಚಾರ. ಈ ಕೆಲಸವನ್ನು ನಾವು ಮುಗಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಲೋಡ್ ಶೆಡ್ಡಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣ ಆಗಿದೆ. ಹಲವು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದಾರೆ. ನೀರಿನ ಪ್ರಮಾಣ ಕಡಿಮೆ ಆಗಿದೆ. ನೀರಿನಿಂದ ಉತ್ಪಾದನೆಯಾಗುವ ವಿದ್ಯುತ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತಿದೆ. ಇದನ್ನು ಸರಿದೂಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದರು.

ಇದನ್ನೂ ಓದಿ:ಜನರ ನಿರೀಕ್ಷೆಗೆ ತಕ್ಕಂತೆ 'ಬ್ರ್ಯಾಂಡ್ ಬೆಂಗಳೂರು' ಯೋಜನೆಯಲ್ಲಿ ಅಭಿವೃದ್ಧಿಯ ನೀಲನಕ್ಷೆ ಸಿದ್ದಪಡಿಸಲಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್

Last Updated : Oct 11, 2023, 10:45 PM IST

ABOUT THE AUTHOR

...view details