ಮೈಸೂರು: ಕಾವೇರಿ ನೀರು ನಿರ್ವಹಣಾ ಸಮಿತಿಯ (CWRC) ಸಭೆಯಲ್ಲಿ ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಮಾಡಿರುವ ಶಿಫಾರಸು ಅಂತಿಮ ಅಲ್ಲ. ನಾಳೆ ನಮ್ಮ ಮನವಿಯನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸುತ್ತೇವೆ. ಕೋರ್ಟ್ ನೀಡುವ ತೀರ್ಪಿನ ಅನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರಿನಲ್ಲಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆಗಸ್ಟ್ 30ರಂದು ನಡೆಯಲಿರುವ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮದ ಸಿದ್ಧತೆಗಳ ಪರಿಶೀಲನೆ ನಡೆಸಿ, ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ನಮಗೆ ನಮ್ಮ ರೈತರ ಹಿತರಕ್ಷಣೆ ಮುಖ್ಯ. ಈ ವಿವಾದವನ್ನು ಬಗೆಹರಿಸುವುದು ಕೂಡಾ ಅಷ್ಟೇ ಮುಖ್ಯ. ನಾವು ಬಿಟ್ಟ ನೀರು ಬಿಳಿಗುಂಡ್ಲು ಮಾಪನ ಕೇಂದ್ರ ತಲುಪಲು 5 ದಿನ ಬೇಕು. ಬೀಗ ಅವರ ಕೈಯಲ್ಲಿದೆ. ಎಷ್ಟು ನೀರು ಕೊಡುತ್ತೇವೆ ಎಂಬುದರಲ್ಲಿ ನಮಗೆ ಯಾವುದೇ ಗೊಂದಲ ಇಲ್ಲ ಎಂದರು.
ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸಿಎಂ ಹೇಳಿಕೆ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಾವು ಕಾನೂನು ತಂಡದ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನೀರಾವರಿ ಇಲಾಖೆ ಜೊತೆ ಮಾತನಾಡಿ ತೀರ್ಮಾನ ಮಾಡಲಾಗುವುದು. ಸಂಕಷ್ಟ ಸೂತ್ರ ಅನುಸರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಬಳಿಯೇ ಸೂಕ್ತ ಪ್ರಮಾಣದ ನೀರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮುಂದಿನ 15 ದಿನಗಳವರೆಗೆ ಪ್ರತಿದಿನ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಬಿಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಸಿಎಂ, ತಮಿಳುನಾಡಿಗೆ ಕರ್ನಾಟಕದಿಂದ 5 ಸಾವಿರ ಕ್ಯೂಸೆಕ್ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಸಭೆ ನಡೆಸಿದೆ. 15 ದಿನಗಳವರೆಗೆ ನೀರು ಹರಿಸುವಂತೆ ಇದಕ್ಕೂ ಮುನ್ನ ಹೇಳಿದ್ದರು, ಹಿಂದಿನ ಸಭೆಯಲ್ಲಿ 10 ಸಾವಿರ ಬಿಡುವಂತೆ ತಿಳಿಸಿದ್ದರು. ಆಗಸ್ಟ್ 31 ರವರಗೆ 86 ಟಿಎಂಸಿ ನೀರು ನೀಡಬೇಕಿತ್ತು, ಆದರೆ ಈವರಗೆ 30 ಟಿಎಂಸಿ ಮಾತ್ರ ನೀಡಿದ್ದೇವೆ ಎಂದರು.