ಕರ್ನಾಟಕ

karnataka

ETV Bharat / state

ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರುವುದಿಲ್ಲ: ಡಿಸಿಎಂ ಅಶ್ವತ್ಥ ನಾರಾಯಣ - KR Nagar Womens first grade college

ಮೈಸೂರು ಜಿಲ್ಲೆಯ ಕೆ.ಆರ್. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

DCM Ashwath Narayan
ಡಾ.ಅಶ್ವತ್ಥ್ ನಾರಾಯಣ್

By

Published : Feb 17, 2021, 7:41 PM IST

ಮೈಸೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಹಿನ್ನೆಲೆಯಲ್ಲಿ ಇನ್ನು ಮುಂದೆ ಅತಿಥಿ ಉಪನ್ಯಾಸಕರೆಂಬ ಪರಿಕಲ್ಪನೆಯೇ ಇರದಂತೆ 8,000 ಕಾಯಂ ಉಪನ್ಯಾಸಕರ ನೇಮಕಾತಿಗೆ ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಹೇಳಿದರು.

ಮೈಸೂರು ಜಿಲ್ಲೆಯ ಕೆ.ಆರ್. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತಮ ಕಲಿಕೆ, ಬೋಧನೆಯು ಶಿಕ್ಷಣ ನೀತಿಯ ಆಶಯ. ಅದಕ್ಕೆ ತಕ್ಕಂತೆ ಗುಣಮಟ್ಟದ ಬೋಧಕರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಬಗ್ಗೆ ಬಜೆಟ್‌ ಪೂರ್ವ ಸಭೆಯಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಡಿಸಿಎಂ ಡಾ. ಅಶ್ವತ್ಥ ನಾರಾಯಣ

ಜತೆಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುದಾನ ಸಾಲುತ್ತಿಲ್ಲ. ಬಜೆಟ್‌ನಲ್ಲಿ ಹಂಚಿಕೆಯಾಗುವ ಒಟ್ಟು ಅನುದಾನದಲ್ಲಿ ಶೇ. 88ರಷ್ಟು ಅನುದಾನ ವೇತನಕ್ಕೇ ಹೋಗುತ್ತಿದೆ. ಇದುವರೆಗೂ ಒಟ್ಟಾರೆ ಬಜೆಟ್‌ನಲ್ಲಿ ಶೇ. 2ರಷ್ಟು ಅನುದಾನವನ್ನಷ್ಟೇ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿತ್ತು. ಈ ಪ್ರಮಾಣವನ್ನು ಶೇ. 3.5ಕ್ಕೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕರ ಮುಂದುವರಿಕೆ:ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಈ ವರ್ಷವೂ ಮುಂದುವರೆಸಲಾಗಿದೆ. ವೇತನ ಏರಿಕೆ, ಸೇವೆ ಕಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅತಿಥಿ ಉಪನ್ಯಾಸಕರು ಮುಂದಿಟ್ಟಿದ್ದಾರೆ. ಆ ಬೇಡಿಕೆಗಳನ್ನು ಈಡೇರಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಗುಣಮಟ್ಟಕ್ಕೆ ಕ್ರಮ: ಸರ್ಕಾರಿ ಸ್ವಾಮ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರಬೇಕು. ನ್ಯಾಕ್‌ ಮಾನ್ಯತೆ ಸಿಗಬೇಕು. ಜತೆಗೆ ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

2 ಕೋಟಿ ಅನುದಾನ:ಕೆ.ಆರ್. ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕೆಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಶೈಕ್ಷಣಿಕ ವರ್ಷದಲ್ಲಿ ಎರಡೂ ಕಾಲೇಜುಗಳಿಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಇನ್ನೂ ಹೆಚ್ಚಿನ ಅನುದಾನ ನೀಡಲು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ನೀಡಲಾಗಿದೆ. ಎಲ್ಲವನ್ನು ಪರಿಶೀಲನೆ ನಡೆಸಿದ ನಂತರ ಖಂಡಿತಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಸಾ.ರಾ.ಮಹೇಶ್‌, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮುಂತಾದವರು ಹಾಜರಿದ್ದರು.

ABOUT THE AUTHOR

...view details