ಮೈಸೂರು: ಶ್ರೀರಂಗಪಟ್ಟಣ ದಸರಾಗೆ 5 ಆನೆಗಳನ್ನು ಕಳುಹಿಸುವಂತೆ ಕೋರಿಕೆ ಬಂದಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು 5 ಆನೆಗಳನ್ನು ಕಳುಹಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ. ಇಂದು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆ ಹಾಗೂ ಅಶ್ವಪಡೆಗೆ ಮೂರನೇ ಹಾಗೂ ಅಂತಿಮ ಹಂತದ ಕುಶಾಲತೋಪು ತಾಲೀಮು ವಸ್ತು ಪ್ರದರ್ಶನದ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ ಅರ್ಜುನ, ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಧನಂಜಯ, ಕಾವೇರಿ, ಚೈತ್ರಾ, ಪಾರ್ಥಸಾರಥಿ, ವಿಜಯ, ಸುಗ್ರೀವ, ಶ್ರೀರಾಮ ಸೇರಿದಂತೆ 12 ಆನೆಗಳು ಮತ್ತು 34 ಅಶ್ವದಳ ತಾಲೀಮಿನಲ್ಲಿ ಭಾಗವಹಿಸಿದ್ದವು.
ನಗರ ಶಸಸ್ತ್ರ ಮಿಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಲ್ಲಿ ಒಟ್ಟು 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿ ಮೂರನೇ ಹಾಗೂ ಅಂತಿಮ ಹಂತದ ತಾಲೀಮು ಪೂರ್ಣಗೊಳಿಸಿದ್ದು, ಜಂಬೂಸವಾರಿ ದಿನ ಅರಮನೆ ಪಕ್ಕದ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಜಂಬೂಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಹಾರಿಸುತ್ತಾರೆ. ಆ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ.
ಶ್ರೀರಂಗಪಟ್ಟಣ ದಸರಾಗೆ 5 ಆನೆಗಳು:ಮೈಸೂರು ಸಂಸ್ಥಾನದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ನಡೆಯುವ ಸಾಂಪ್ರದಾಯಿಕ ದಸರಾಗೆ ಮೈಸೂರು ದಸರಾಗೆ ಆಗಮಿಸಿರುವ 14 ಗಜಪಡೆಗಳಲ್ಲಿ ಮಹೇಂದ್ರ ನೇತೃತ್ವದ 2 ಹೆಣ್ಣಾನೆ ಹಾಗೂ 2 ಗಂಡಾನೆ ಸೇರಿ ಒಟ್ಟು 5 ಆನೆಗಳನ್ನು ಕಳುಹಿಸುವಂತೆ ಕೇಳಲಾಗಿದ್ದು, ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಹಾಗೂ ಶ್ರೀರಂಗಪಟ್ಟಣ ದಸರಾ ಆಯೋಜಕರಿಂದ ಮುಚ್ಚಳಿಕೆ ಪತ್ರ ತೆಗೆದುಕೊಂಡು ನಮ್ಮಲ್ಲಿರುವ ವೈದ್ಯರು ಹಾಗೂ ಅರಣ್ಯಾಧಿಕಾರಿಗಳು ಮತ್ತು ಮಾವುತರನ್ನು ಶ್ರೀರಂಗಪಟ್ಟಣ ದಸರಾಗೆ ಕಳುಹಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.
ಮೂರನೇ ಹಂತದ ಕುಶಾಲತೋಪು ತಾಲೀಮಿನ ಸಂದರ್ಭದಲ್ಲಿ ಯಾವುದೇ ಆನೆಗಳು ಬೆದರದೆ ತಾಲೀಮಿನಲ್ಲಿ ಭಾಗವಹಿಸಿದ್ದು, ಜಂಬೂಸವಾರಿಗೆ ಎಲ್ಲಾ ಆನೆಗಳು ಸಿದ್ಧವಾಗಿವೆ. ಜೊತೆಗೆ ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಇದೇ ಸಂದರ್ಭದಲ್ಲಿ ಡಿಸಿಎಫ್ ಕರಿಕಾಳನ್ ಸ್ಪಷ್ಟಪಡಿಸಿದರು.