ಮೈಸೂರು:ಮೈಸೂರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಜ್ಞ ವೈದ್ಯರು, ನರ್ಸ್ಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆ, ಹಾಸಿಗೆಗಳ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಕೋವಿಡ್ ಚಿಕಿತ್ಸೆಗಾಗಿ ಹಾಸಿಗೆಯನ್ನು ಹೆಚ್ಚಿಸಬೇಕೆಂದು ಈ ವೇಳೆ ಸೂಚನೆ ನೀಡಿದರು.
ಪಿಪಿಇ ಕಿಟ್ ಧರಿಸಿ ಸೋಂಕಿತರ ವಾರ್ಡ್ ಪರಿಶೀಲಿಸಿದ ಡಿಸಿ ರೋಹಿಣಿ ಸಿಂಧೂರಿ
ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಬೆಡ್‌ಗಳನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೆಚ್ಚು ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳು ಹಾಗೂ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಕೆ.ಆರ್. ಆಸ್ಪತ್ರೆಯಲ್ಲಿ ಈಗ 178 ಬೆಡ್‌ಗಳಿವೆ. ಇನ್ನೂ 200 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಹೆಚ್ಚಿಸುವಂತೆ ಹಾಗೂ ಟ್ರಾಮಾ ಕೇರ್ ಸೆಂಟರ್ನಲ್ಲೂ ಕೋವಿಡ್ ಚಿಕಿತ್ಸೆಗೆ ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲು ಆಗಿರುವ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸುವಂತೆ ತಿಳಿಸಿದರು.
ವೈದ್ಯಕೀಯ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದಲ್ಲಿ 154 ವಿದ್ಯಾರ್ಥಿಗಳಿದ್ದು, ಅವರನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಸೂಕ್ತ ತರಬೇತಿ ನೀಡುವ ಬಗ್ಗೆ ಆಲೋಚಿಸುವಂತೆಯೂ ಈ ವೇಳೆ ಅವರು ತಿಳಿಸಿದರು. ನಂತರ ಪಿಪಿಇ ಕಿಟ್ ಧರಿಸಿ ಕೆ.ಆರ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.