ಕರ್ನಾಟಕ

karnataka

ETV Bharat / state

ಸ್ಕ್ಯಾನಿಂಗ್ ಸೆಂಟರ್​ಗಳಿಗೆ ಭೇಟಿ ನೀಡಿ, ಪರಿಶೀಲಿಸಿ: ಮೈಸೂರು ಡಿಸಿ ರಾಜೇಂದ್ರ ಸೂಚನೆ - ಲಿಂಗ ಪತ್ತೆ

ಶನಿವಾರ ಮೈಸೂರು ನಗರದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಸಿ & ಪಿಎನ್‌ಡಿಟಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸ್ಕ್ಯಾನಿಂಗ್​ ಸೆಂಟರ್​​ಗಳ ಕುರಿತು ಹಲವು ಸೂಚನೆಗಳನ್ನು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ನೀಡಿದರು.

PC & PNDT meeting
ಪಿಸಿ & ಪಿಎನ್‌ಡಿಟಿ ಸಭೆ

By ETV Bharat Karnataka Team

Published : Dec 17, 2023, 10:49 AM IST

ಮೈಸೂರು:ಜಿಲ್ಲೆಯಲ್ಲಿರುವ ವಿವಿಧ ಸ್ಕ್ಯಾನಿಂಗ್​​​ ಸೆಂಟರ್​​ಗಳಿಗೆ ತಾಲೂಕು ಮತ್ತು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯಡಿ ಸ್ಕ್ಯಾನಿಂಗ್​​ ಕೇಂದ್ರಗಳು ನೈತಿಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ. ರಾಜೇಂದ್ರ ಅವರು ತಿಳಿಸಿದರು.

ಶನಿವಾರ ನಗರದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಿಸಿ & ಪಿಎನ್‌ಡಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಸಿ & ಪಿಎನ್‌ಡಿಟಿ ಕಾಯ್ದೆಯನ್ವಯ ಎಲ್ಲಾ ಸ್ಕ್ಯಾನಿಂಗ್​ ಸೆಂಟರ್​​ಗಳು ನೋಂದಣಿಯಾಗಿರಬೇಕು. ನೋಂದಣಿಯಾಗದೇ ಸ್ಕ್ಯಾನಿಂಗ್ ಸೆಂಟರ್​​ಗಳನ್ನು ನಡೆಸುತ್ತಿದ್ದರೆ ಅಥವಾ ನೋಂದಣಿಯಾದ ಕೇಂದ್ರಗಳಲ್ಲೂ ಅನಧಿಕೃತವಾಗಿ ಲಿಂಗ ಪತ್ತೆ ಚಟುವಟಿಕೆಗಳು ನಡೆಯುತ್ತಿದ್ದರೆ ಅವುಗಳನ್ನು ಗುರುತಿಸಿ, ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿ ವರದಿ ನೀಡಿ. ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಫಾರ್ಮ್ ಎಫ್ ಅನ್ನು ಕಡ್ಡಾಯವಾಗಿ ನೀಡುವಂತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು ಪಿಸಿಪಿಎನ್​ಡಿಟಿ 288 ಕೇಂದ್ರಗಳಿದ್ದು, 232 ಕೇಂದ್ರಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. 80 ಕೇಂದ್ರಗಳು ಫಾರ್ಮ್ ಎಫ್​ ಅನ್ನು ಒದಗಿಸದೆ ಇಲ್ಲದಿರುವುದರ ಬಗ್ಗೆ ನೋಟಿಸ್ ನೀಡಲಾಗಿದೆ. ಪ್ರತಿ ಸೆಂಟರ್‌ಗಳು ಕಡ್ಡಾಯವಾಗಿ ಎಫ್ ಫಾರಂ ಅನ್ನು ಸಲ್ಲಿಸುವಂತೆ ಮತ್ತು ಸಲ್ಲಿಕೆಯಾದ ಫಾರಂಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಜಿಲ್ಲೆಯಾದ್ಯಂತ ಪ್ರಸ್ತುತ 25 ಸೆಂಟರ್​​ಗಳು ಇತರೆ ಕಾರಣಗಳಿಂದ ಕೆಲಸ ನಿಲ್ಲಿಸಿದ್ದು, ಈ ಸೆಂಟರ್​ಗಳಲ್ಲಿರುವ ಯಂತ್ರಗಳ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಿ, ಸೀಲ್ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ಅತ್ಯಂತ ಜಾಗರೂಕತೆಯಿಂದ ಕಟ್ಟುನಿಟ್ಟಾಗಿ ಕಾಯ್ದೆಯನ್ವಯ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕಾಯ್ದೆಯನ್ವಯ ಸ್ಕ್ಯಾನಿಂಗ್ ಸಂದರ್ಭದಲ್ಲಿ ಆ ಸ್ಥಳದಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾರು ಪ್ರವೇಶಿಸುವಂತಿಲ್ಲ. ಸ್ಥಳದಲ್ಲಿ ಗಡಿಯಾರವನ್ನು ಹೊರತುಪಡಿಸಿ ಯಾವುದೇ ರೀತಿಯ ಚಿತ್ರಗಳು, ಸಂಕೇತಗಳು ಭಾವಚಿತ್ರಗಳು ಇರುವಂತಿಲ್ಲ. ಪರೋಕ್ಷವಾಗಿ ಮಗುವಿನ ಲಿಂಗವನ್ನು ಸೂಚಿಸುವಂತೆ ಯಾವುದೇ ರೀತಿಯ ಸನ್ನೆ, ಸೂಚನೆಗಳನ್ನು ನೀಡುವಂತಿಲ್ಲ. ಎಲ್ಲಾ ಸ್ಕ್ಯಾನಿಂಗ್ ಸೆಂಟರ್​ ಇಲ್ಲಿ ಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂದು ಫಲಕಗಳನ್ನು ಅಳವಡಿಸಬೇಕು. ರೇಡಿಯೋಲಜಿಸ್ಟ್​ಗಳು ಎರಡು ಸ್ಕ್ಯಾನಿಂಗ್ ಸೆಂಟರ್​ಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲು ಕಾಯ್ದೆಯಡಿ ಅವಕಾಶವಿದೆ ಎಂದರು.

ಪ್ರತಿಯೊಂದು ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್​ಗಳಲ್ಲಿ ಕೆಪಿಎಂಇ ಲೈಸೆನ್ಸ್​​ ನಂಬರ್, ವೈದ್ಯರು ಭೇಟಿ ನೀಡುವ ಸಮಯ, ವೈದ್ಯರು ಹೆಸರು ಎಂಬಿಬಿಎಸ್ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಪ್ರತಿದಿನವೂ ಆ ವೈದ್ಯರೇ ಭೇಟಿ ನೀಡುತ್ತಿದ್ದಾರಾ ಎಂಬುದನ್ನು ಆಗಾಗ್ಗೆ ಪರಿಶೀಲಿಸಬೇಕು. ಇತ್ತೀಚೆಗೆ ಹೆಚ್ಚಿನ ಆಯುರ್ವೇದ ಕ್ಲಿನಿಕ್​ಗಳು ಕಾಣಿಸಿಕೊಳ್ಳುತ್ತಿದ್ದು, ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು.

ಆಯುರ್ವೇದ ಕ್ಲಿನಿಕ್​ಗಳಲ್ಲಿ ಆಯುರ್ವೇದ ಔಷಧಿಗಳನ್ನೇ ನೀಡಬೇಕು. ಇದನ್ನು ಹೊರತುಪಡಿಸಿ ಇಂಗ್ಲಿಷ್ ಔಷಧಿ ನೀಡುತ್ತಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇತ್ತೀಚಿಗೆ ನಗರದಲ್ಲಿ ನರದೌರ್ಬಲ್ಯ ಹಾಗೂ ಲೈಂಗಿಕ ಸಮಸ್ಯೆ ಕುರಿತು ಔಷಧಿ ನೀಡುವ ಟೆಂಟ್​ ರೀತಿಯ ಕ್ಲಿನಿಕ್​​ಗಳು ಕಾಣಿಸಿಕೊಳ್ಳುತ್ತಿದ್ದು, ಇವು ನಾಗರೀಕರ ಆರೋಗ್ಯ ಹಾಗೂ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ. ಇವುಗಳು ನಿಜವಾಗಿಯೂ ಲೈಸೆನ್ಸ್ ಪಡೆದ ಕ್ಲಿನಿಕ್​ಗಳೇ ಎಂದು ಪರಿಶೀಲಿಸಿ, ವರದಿ ನೀಡಿ ಎಂದು ಸೂಚಿಸಿದರು.

ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಪೊಲೀಸ್, ಎನ್‌ಜಿಒ, ರೇಡಿಯೋಲಜಿಸ್ಟ್, ಮೆಡಿಕಲ್ ಆಫೀಸರ್ ಸೇರಿದಂತೆ ಇತರೆ ಅಧಿಕಾರಿಗಳಿದ್ದು, ತಾಲೂಕು ಮಟ್ಟದಲ್ಲಿಯೂ ಸಮಿತಿ ರಚಿಸಿ ಪ್ರತಿ ತಿಂಗಳು ಸಭೆ ನಡೆಸಿ ಎಂದು ತಾಲೂಕು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಪಿ.ಸಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜು, ವಿವಿಧ ತಾಲೂಕು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಭ್ರೂಣ ಹತ್ಯೆ ಪ್ರಕರಣ: ಮಂಡ್ಯದ ಆಲೆಮನೆಗೆ ಮಾಜಿ ಸಚಿವ ಅಶೋಕ್ ಭೇಟಿ, ಅಧಿಕಾರಿಗಳಿಗೆ ತರಾಟೆ

ABOUT THE AUTHOR

...view details