ಮೈಸೂರು: ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ. ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕಂಡು ಬಂದಿದೆ. ಅಲ್ಲಿ ಕಿಲ್ಲಿಂಗ್ ಆಪರೇಷನ್ ಕೂಡ ನಡೆಯುತ್ತಿದೆ ಎಂದಿದ್ದಾರೆ.
ಕಳೆದ ವರ್ಷ ಮೈಸೂರಿನಲ್ಲಿ ಹಕ್ಕಿ ಜ್ವರದ ಹಿನ್ನೆಲೆ ಕಿಲ್ಲಿಂಗ್ ಆಪರೇಷನ್ ನಡೆದಿತ್ತು. ಮೇಟಗಳ್ಳಿಯ ಫಾರ್ಮ್‌ನಲ್ಲಿದ್ದ 5,000 ಕೋಳಿಗಳನ್ನು ಸಾಯಿಸಲಾಗಿತ್ತು. ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದೇವೆ. ಕೇರಳ ಹಾಗೂ ಮಡಿಕೇರಿ ಗಡಿಯಲ್ಲಿ ಪಕ್ಷಿ ಹಾಗೂ ಕೋಳಿ ಸಾಗಾಟ ನಿಷೇಧಿಸಲಾಗಿದೆ. ಆ ರಾಜ್ಯಗಳಿಂದ ಬರುವ ವಾಹನಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದರು.
ವಲಸೆ ಹಕ್ಕಿಗಳ ಮೇಲೆ ನಿಗಾ :ಎಲ್ಲೆಲ್ಲಿ ವಲಸೆ ಹಕ್ಕಿಗಳು ಬರುತ್ತವೆಯೋ ಅಲ್ಲಿ ಹಿಕ್ಕೆಗಳ ಸಂಗ್ರಹ ಮಾಡಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಈವರೆಗೆ ಬಂದಿರುವ ಲ್ಯಾಬ್ ವರದಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಮೃಗಾಲಯಕ್ಕೆ ತಾತ್ಕಾಲಿಕ ಪ್ರವೇಶ ನಿರ್ಬಂಧ ಅಥವಾ ಇತರೆ ನಿರ್ಧಾರಗಳ ಬಗ್ಗೆ ತೀರ್ಮಾನಿಸಿಲ್ಲ. ಹಕ್ಕಿಜ್ವರ ಪತ್ತೆಯಾದ್ರೆ ಮುಂದಿನ ಹಂತದ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಕೊರೊನಾ ಲಸಿಕೆ ಅಭಿಯಾನಕ್ಕೆ ಸಿದ್ಧತೆ ಪೂರ್ಣ :ಪ್ರಾರಂಭಿಕ ಹಂತದಲ್ಲಿ ಮೈಸೂರಿನ 32 ಸಾವಿರ ಕೊರೊನಾ ವಾರಿಯರ್‌ಗಳಿಗೆ ಲಸಿಕೆ ಹಾಕುತ್ತೇವೆ. ಕೋವಿಡ್ ಲಸಿಕೆ ಅಭಿಯಾನ ಸಂಬಂಧ ಮುಖ್ಯ ಕಾರ್ಯದರ್ಶಿ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.