ಮೈಸೂರು: ನಾಳೆ ನಾಡಹಬ್ಬ ದಸರಾಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪರಿಶೀಲನೆ ನಡೆಸಿದರು.
ನಾಳೆ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ ದೊರಕಲಿದ್ದು, ಇಂದು ಸಚಿವ ಎಸ್.ಟಿ ಸೋಮಶೇಖರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅರಮನೆಗೆ ಭೇಟಿ ನೀಡಿ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ಹಾಗೂ ಗಜಪಡೆ ವಾಸ್ತವ್ಯ ಹೂಡಿರುವ ಸ್ಥಳಕ್ಕಾಗಮಿಸಿ ಗಜಪಡೆಗೆ ಬೆಲ್ಲ ಹಾಗೂ ಕಬ್ಬನ್ನು ನೀಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ದಸರಾ ಉದ್ಘಾಟನೆ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸಿಎಂ ಮೈಸೂರಿಗೆ ಆಗಮಿಸುತ್ತಾರೆ. ಕೋವಿಡ್ ಸಂಬಂಧ ಹಿರಿಯ ಅಧಿಕಾರಿಗಳ ಸಭೆ ನಡೆಸುತ್ತಾರೆ. ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಸರಳ ದಸರಾಗೆ ಚಾಲನೆ ನೀಡಲಿದ್ದು, ಈ ಬಾರಿ ಎಲ್ಲರಿಗೂ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಕೋವಿಡ್ ಇರುವ ಕಾರಣ 3-4 ಸಚಿವರು ಮಾತ್ರ ಆಗಮಿಸುತ್ತಾರೆ. ಎಕ್ಸ್ಪರ್ಟ್ ಕಮಿಟಿ ಪ್ರಕಾರ 200 ಜನ ಮಾತ್ರ ಭಾಗವಹಿಸಬೇಕೆಂದು ಹೇಳಲಾಗಿದೆ. ನಾಳೆ ಬರುವ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಜಂಬೂ ಸವಾರಿಗೂ 300 ಜನಕ್ಕೆ ಮಾತ್ರ ಅವಕಾಶವಿದ್ದು, ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದರು.