ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿಕೆ ಮೈಸೂರು: ''ದಸರಾ ಉದ್ಘಾಟನೆ ಯಾವುದೇ ಅಡಚಣೆ ಉಂಟಾಗಬಾರದು. ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಅನುಮತಿ ನಿರಾಕರಿಸಲಾಗಿದೆ'' ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಅಕ್ಟೋಬರ್ 15 ರಂದು ದಸರಾ ಉದ್ಘಾಟನೆ ನಡೆಯಲಿದೆ. ಆದರೆ, ಯಾವುದೇ ಸಮಸ್ಯೆಯಾಗಬಾರದು. ಶಾಂತಿ ಸುವ್ಯವಸ್ಥೆಗಾಗಿ ಎರಡೂ ಕಾರ್ಯಕ್ರಮಗಳಿಗೂ ಪರವಾನಗಿ ನೀಡಿಲ್ಲ. ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
''ಮಹಿಷ ದಸರಾ ಸಮಿತಿಯಿಂದ ಅ.13ರಂದು ಮಹಿಷ ದಸರಾ ಆಚರಣೆ ಹಿನ್ನೆಲೆ, ಬೆಳಿಗ್ಗೆ 9.30ಕ್ಕೆ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ನಂತರ ಚಾಮುಂಡಿ ಬೆಟ್ಟದ ತಪ್ಪಲಿನ ಮುಖ್ಯದ್ವಾರ ತಾವರೆ ಕಟ್ಟೆ ಬಳಿಯಿಂದ ಮೃಗಾಲಯ ರಸ್ತೆ ಮೂಲಕ ಮೆರವಣಿಗೆ ಸಂಚರಿಸಿ ಪುರಭವನದ ಅಂಬೇಡ್ಕರ್ ಮತ್ಥಳಿಗೆ ಮಾಲಾರ್ಪಣೆ, ಅದೇ ಆವರಣದಲ್ಲಿ ವೇದಿಕೆಯ ಕಾರ್ಯಕ್ರಮ ಹಮ್ಮಿಕೊಳ್ಳಲು ಪೊಲೀಸ್ ಅನುಮತಿ ನೀಡುವಂತೆ ಮಹಿಷ ದಸರಾ ಸಮಿತಿ ಮನವಿ ಮಾಡಿತ್ತು'' ಎಂದರು.
''ಮತ್ತೊಂದೆಡೆ, ಭಾರತೀಯ ಜನತಾ ಪಾರ್ಟಿ ಮಹಿಷ ದಸರಾ ಆಚರಣೆ ವಿರೋಧಿಸಿ ಅ.13 ರಂದು ಬೆಳಿಗ್ಗೆ 8ಕ್ಕೆ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮದ ನಿಮಿತ್ತ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಸಾಗಿವುದು ಹಾಗೂ ವಾಹನಗಳಲ್ಲಿ ರಸ್ತೆಯ ಮುಖಾಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ಈ ಕಾರ್ಯಕ್ರಮವನ್ನು ನಡೆಸಲು ಪೊಲೀಸ್ ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು. ಆದ್ರೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ'' ಎಂದು ಅವರು ವಿವರಿಸಿದರು.
ಯಾರೇ ತಪ್ಪು ಮಾಡಿದರೂ ಕ್ರಮ- ನಗರ ಪೊಲೀಸ್ ಆಯುಕ್ತ:''ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಎರಡೂ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಣೆ ಮಾಡಿದ್ದೇವೆ. ಒಂದು ವೇಳೆ ಈ ಕಾರ್ಯಕ್ರಮಗಳನ್ನು ನಡೆಸಲು ಮುಂದಾದಲ್ಲಿ 144 ಜಾರಿ ಮಾಡಲಾಗುತ್ತದೆ. ಸನ್ನಿವೇಶವನ್ನು ಗಮನಿಸಿ, 144 ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಮೈಸೂರು ನಗರದ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಇರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಇದನ್ನು ಮೀರಿದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ನವರಾತ್ರಿ ವೇಳೆಗೆ ಹೊರ ಬೀಳಲಿದೆಯೇ ನಿಗಮ ಮಂಡಳಿ ಅಧ್ಯಕ್ಷ - ಉಪಾಧ್ಯಕ್ಷರ ಮೊದಲ ಪಟ್ಟಿ?