ಮೈಸೂರು: ನಾಡಹಬ್ಬ ದಸರಾ- 2023 ಗಜಪಯಣ ಸೆಪ್ಟೆಂಬರ್ 1ರಂದು ನಡೆಯಲಿದ್ದು, ಅಂದು ಮೊದಲ ಹಂತದ ಗಜಪಡೆ ಸಾಂಸ್ಕೃತಿಕ ನಗರಿಗೆ ಆಗಮಿಸಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಸರಾ ಮಹೋತ್ಸವಕ್ಕೆ ಪ್ರಥಮ ಕಾರ್ಯಕ್ರಮ ಗಜಪಯಣ ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ನಡೆಯಲಿದೆ ಎಂದರು.
ಈ ಬಾರಿ 14 ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಮುಖ್ಯಮಂತ್ರಿಗಳು ಅದ್ಧೂರಿ ದಸರಾ ಮಾಡಲು ಸೂಚಿಸಿದ್ದಾರೆ. ವಿಶೇಷ ಅನುದಾನ ಕೇಳಿಲ್ಲ. ಅದ್ಧೂರಿ ದಸರಾಗೆ ಬೇಕಾದಷ್ಟು ಅನುದಾನ ಕೊಡಲಾಗುತ್ತದೆ. ಮಹೋತ್ಸವದ ಉದ್ಘಾಟಕರು ಯಾರು ಎಂಬುದನ್ನು ಸಿಎಂ ತೀರ್ಮಾನಿಸುತ್ತಾರೆ ಎಂದು ಸಚಿವರು ಹೇಳಿದರು.
ಮಗ ಲೋಕಸಭೆಗೆ ಸ್ಪರ್ಧಿಸುವ ವಿಚಾರ : ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಚಿವ ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ, ಕಳೆದ ಮೂರು ಬಾರಿಯೂ ಸುನೀಲ್ ಬೋಸ್ಗೆ ಅವಕಾಶ ಸಿಕ್ಕಿಲ್ಲ. ಅವನು ಯಾವುದೇ ಬೇಸರ ಮಾಡಿಕೊಂಡಿಲ್ಲ. ಆದರೂ ಪಕ್ಷ ಸಂಘಟನೆ ಮಾಡುತ್ತಿದ್ದಾನೆ. ಈ ಬಾರಿ ಅವಕಾಶ ಸಿಕ್ಕರೆ ಸ್ಪರ್ಧಿಸುತ್ತಾನೆ. ಈ ವಿಚಾರದ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಮಗೆ ಪಕ್ಷದಿಂದ ಈ ರೀತಿಯ ಯಾವುದೇ ಸೂಚನೆ ಬಂದಿಲ್ಲ ಎಂದರು.
ಜಿಲ್ಲಾಧಿಕಾರಿ ಹೇಳಿಕೆ: ಸೆಪ್ಟೆಂಬರ್ 1ರಂದು ಅಭಿಮನ್ಯು ನೇತೃತ್ವದ ಗಜಪಡೆ ಕಾಡಿನಿಂದ ನಾಡಿಗೆ ಪ್ರಯಾಣ ಬೆಳೆಸಲಿದೆ. ನಂತರ ಲಾರಿ ಮೂಲಕ ಮೈಸೂರಿಗೆ ಆಗಮಿಸಲಿವೆ. ದಸರಾ ಆಚರಣೆ ಬಗ್ಗೆ ಉನ್ನತ ಮಟ್ಟದ ಹೈ ಪವರ್ ಕಮಿಟಿ ಸಭೆ ಬೆಂಗಳೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿ ಜಿಲ್ಲಾಡಳಿತವೂ ಉಸ್ತುವಾರಿ ಸಚಿವ ಮಹಾದೇವಪ್ಪರ ನೇತೃತ್ವದಲ್ಲಿ, ಸ್ಥಳೀಯ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆಯನ್ನು ಜಿಲ್ಲಾ ಮಟ್ಟದಲ್ಲಿ ಈ ವಾರವೇ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮಾಹಿತಿ ನೀಡಿದರು.
ಇದನ್ನೂ ಓದಿ:ಅರ್ಥಪೂರ್ಣ, ಅದ್ಧೂರಿ ದಸರಾ ಆಚರಣೆಗೆ ನಿರ್ಧಾರ, ಉದ್ಘಾಟಕರಾಗಿ ಸುತ್ತೂರು ಸ್ವಾಮೀಜಿ ಹೆಸರು ಪ್ರಸ್ತಾಪ: ಸಿಎಂ ಸಿದ್ದರಾಮಯ್ಯ