ಕರ್ನಾಟಕ

karnataka

ETV Bharat / state

ದಸರಾ ಆನೆ ಬಲರಾಮ ಅಸಂಖ್ಯಾತ ಜನರ ಪ್ರೀತಿ ಪಾತ್ರ: ಪ್ರಧಾನಿ ಮೋದಿ ಸಂತಾಪ - ಬಲರಾಮ ಆನೆ

ವಿಶ್ವಪ್ರಸಿದ್ಧ ಮೈಸೂರು ಜಂಬೂಸವಾರಿಯಲ್ಲಿ ಹಲವು ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿರುವ ಬಲರಾಮ ಆನೆಯ ಅಗಲಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

elephant balaram
ದಸರಾ ಆನೆ ಬಲರಾಮ

By

Published : May 9, 2023, 7:05 AM IST

Updated : May 9, 2023, 8:17 AM IST

ನವದೆಹಲಿ/ಮೈಸೂರು:ನಾಡಹಬ್ಬ ದಸರಾ ಜಂಬೂಸವಾರಿಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿರುವ 'ಬಲರಾಮ ಆನೆ' ಅನಾರೋಗ್ಯದಿಂದ ಕಳೆದ ಭಾನುವಾರ ಮೃತಪಟ್ಟಿದೆ. ಸೌಮ್ಯ ಸ್ವಭಾವದ ಆನೆಯ ಸಾವಿಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

"ಹಲವು ವರ್ಷಗಳಿಂದ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದ. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅಗಲಿಕೆಯಿಂದ ದುಃಖವಾಗಿದೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್‌ ಮಾಡಿದ್ದಾರೆ.

ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಆನೆ ಎಲ್ಲರ ಪ್ರೀತಿ ಪಾತ್ರವಾಗಿತ್ತು. ಇತ್ತೀಚಿಗೆ ತೀವ್ರ ಅಸ್ವಸ್ಥಗೊಂಡಿದ್ದ ಬಲರಾಮನಿಗೆ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಬಾಯಿ ಹುಣ್ಣಿನಿಂದ ಬಳಲುತ್ತಿದ್ದ ಬಲರಾಮ ಆಹಾರ ಸೇವಿಸದೇ ನೀರು‌ ಕುಡಿಯದೇ ಅಸ್ವಸ್ಥಗೊಂಡಿತ್ತು. ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿತ್ತು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ:ಬಲರಾಮನ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ನಾಗರಹೊಳೆ ಹುಲಿ ಅಭಯಾರಣ್ಯರಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

1978 ರಲ್ಲಿ ಸೆರೆ ಹಿಡಿದಿದ್ದ ಆನೆ:ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ 1978ರಲ್ಲಿ ಸೆರೆ ಹಿಡಿಯಲಾದ ಬಲರಾಮನನ್ನು ಮತ್ತಿಗೋಡು ಆನೆ ಶಿಬಿರದಲ್ಲಿ ಪೋಷಿಸಲಾಗುತಿತ್ತು. ಕಳೆದ ಐದಾರು ವರ್ಷದಿಂದ ಮತ್ತಿಗೂಡು ಆನೆ ಕ್ಯಾಂಪ್ ಸಮೀಪವಿರುವ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಕ್ಯಾಂಪ್‌ಗಳಲ್ಲಿ ಪಾಲನೆ ಮಾಡಲಾಗುತ್ತಿತ್ತು.

ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವ ಬಲರಾಮ

ದಸರಾ ಎಂದಾಕ್ಷಣ ಥಟ್ಟನೆ ನೆನಪಾಗುವುದು ವಿಶ್ವವಿಖ್ಯಾತ ಜಂಬೂಸವಾರಿ. ನಾಡ‌ ಅಧಿದೇವತೆ ಚಾಮುಂಡೇಶ್ವರಿಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಬೀದಿಗಳಲ್ಲಿ ಸಾಗುವ ಗಜಪಡೆಯ ಗಾಂಭೀರ್ಯ ನಡಿಗೆಯನ್ನು ಕಣ್ಣು ತುಂಬಿಕೊಳ್ಳುವುದೇ ರೋಚಕ. ಈ ಮಹತ್ತರ ಜವಾಬ್ದಾರಿಯನ್ನು ಹಲವು ಆನೆಗಳು ಯಶಸ್ವಿಯಾಗಿ ನಿರ್ವಹಿಸಿವೆ. ಅದರಲ್ಲಿ ಪ್ರಮುಖವಾದ ಆನೆ ಬಲರಾಮ. ಸೌಮ್ಯ ಸ್ವಭಾವದ ಬಲರಾಮ ಒಂದಲ್ಲ ಎರಡಲ್ಲ 14 ಬಾರಿ ಅಂಬಾರಿ ಹೊತ್ತಿದ್ದಾನೆ. ಈ ಆನೆಯ ಮೇಲೆ ಜನರಿಗೆ ವಿಶೇಷ ಪ್ರೀತಿ ಇತ್ತು. ದಸರಾದಲ್ಲಿ ಅತ್ಯಂತ ಯಶಸ್ವಿಯಾಗಿ ಜಂಬೂಸವಾರಿ ಜವಾಬ್ದಾರಿ ನಿರ್ವಹಿಸಿದ ಬಲರಾಮ ಇನ್ನು ನೆನಪು ಮಾತ್ರ.

ಇದನ್ನೂ ಓದಿ:14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಇನ್ನಿಲ್ಲ..

Last Updated : May 9, 2023, 8:17 AM IST

ABOUT THE AUTHOR

...view details