ಮೈಸೂರು: ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದ್ದು, ಇಂದು ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಅರಣ್ಯ ಇಲಾಖೆ ಹಾಗೂ ಹುಣಸೂರು ತಾಲೂಕು ಆಡಳಿತವು ವೀರನಹೊಸಳ್ಳಿಯ ನಾಗರಹೊಳೆ ಪಾರ್ಕಿನ ಹೆಬ್ಬಾಗಿಲ ಬಳಿ ಅಭಿಮನ್ಯು ನೇತೃತ್ವದ 7 ಆನೆಗಳಿಗೆ ಪೂರ್ಣ ಕುಂಭದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾಧಿಕಾರಿ, ಸಂಸದರು ಹಾಗೂ ಸ್ಥಳೀಯ ಶಾಸಕರಾದ ಹೆಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಗಣ್ಯರು ಗಜಪಡೆಗೆ ಪೂಜೆ ಸಲ್ಲಿಸಿದರು.
ಗೋಪಾಲಸ್ವಾಮಿ, ಕಾವೇರಿ, ಧನಂಜಯ, ಅಶ್ವತ್ಥಾಮ, ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ದಸರಾದಲ್ಲಿ ಭಾಗವಹಿಸಲಿವೆ. ಈ ಬಾರಿ ಅಭಿಮನ್ಯು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ, ಅಲಂಕೃತವಾದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ.