ಮೈಸೂರು:ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಚರಣೆಗಳಲ್ಲಿ ಒಂದಾದ ಖಾಸಗಿ ದರ್ಬಾರ್ ಅಕ್ಟೋಬರ್ 17 ರಿಂದ ಆರಂಭವಾಗಲಿದ್ದು, ಅರಮನೆಯಲ್ಲಿರುವ ರತ್ನಖಚಿತ ಸಿಂಹಾಸವನ್ನು ಸೆಪ್ಟೆಂಬರ್ 18 ರ ಶುಕ್ರವಾರ ಜೋಡಣೆ ಮಾಡಲಾಗುವುದು. ಈ ಹಿನ್ನೆಲೆ ಅಂದು 2 ಗಂಟೆವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಯದುವಂಶದ ಪರಂಪರೆಯಲ್ಲಿ ಖಾಸಗಿ ದರ್ಬಾರ್ ದಸರಾದ ಪ್ರಮುಖ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ಚಿನ್ನದಿಂದ ತಯಾರಿಸಲಾಗಿರುವ ಶತಮಾನಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಮೇಲೆ 9 ದಿನಗಳ ಕಾಲ ಮಹಾರಾಜರು ಕುಳಿತು ನವರಾತ್ರಿ ಆಚರಿಸುವುದು ಸಂಪ್ರದಾಯ. ಈ ಹಿನ್ನಲೆ ಸೆಪ್ಟೆಂಬರ್ 18 ರ ಶುಕ್ರವಾರ ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೋಮ್ನಲ್ಲಿರುವ ಬಿಡಿ ಬಿಡಿ ರತ್ನಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್ಗೆ ತಂದು ಶುಭ ಮುಹೂರ್ತದಲ್ಲಿ ಜೋಡಿಸಲಾಗುತ್ತದೆ, ಅದಕ್ಕೂ ಮುನ್ನೆ ಬೆಳಿಗ್ಗೆ ಅರಮನೆ ರಾಜಪುರೋಹಿತರಿಂದ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ಬೆಳಿಗ್ಗೆ 6.30 ರಿಂದ 1.30 ಯೊಳಗೆ ಸಿಂಹಾಸನ ಜೋಡಣೆ ಆಗಲಿದೆ.
ಹೋಮ ಹವನಗಳು:
ದರ್ಬಾರ್ ಹಾಲ್ನಲ್ಲಿ ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 6.30 ರಿಂದ ಅರಮನೆಯ ಪುರೋಹಿತರು ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ, ಶಾಂತಿಹೋಮ ಪೂಜೆಗಳನ್ನು ನೆರವೇರಿಸಲಿದ್ದು, ರಾಜವಂಶಸ್ಥರಾದ ಪ್ರಮೋದ ದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ.