ಮೈಸೂರು :ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಭಾರಿ ಪ್ರಮಾಣದ ನೀರನ್ನು ಬಿಟ್ಟಿರುವುದರಿಂದ ದಕ್ಷಿಣ ಕಾಶಿ ನಂಜನಗೂಡಿನ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹದ ಭೀತಿಯಲ್ಲಿ ದಕ್ಷಿಣ ಕಾಶಿ ಕಳೆದ ಒಂದು ವಾರದಿಂದ ಕಬಿನಿ ಜಲಾಶಯದ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ, ಜಲಾಶಯದಿಂದ ಕಪಿಲಾ ನದಿಗೆ 66,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಸೇತುವೆಗಳು ಮುಳುಗಡೆಯಾಗಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಕಪಿಲಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕಳೆದ ವರ್ಷದ ನೆರೆಯನ್ನ ಮರೆಯುವ ಮುನ್ನವೇ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. ನದಿಪಾತ್ರದಲ್ಲಿರುವ ಶ್ರೀಕಂಠೇಶ್ವರ ಸ್ನಾನಘಟ್ಟದ, ಹದಿನಾರುಕಾಲು ಮಂಟಪ, ಪರಶುರಾಮ ದೇವಾಲಯ, ಆಂಜನೇಯ ಸನ್ನಿಧಿ ಮುಳುಗಡೆಯಾಗಿದ್ದು, ಜೊತೆಗೆ ಹಳ್ಳದಕೇರಿ ಹಾಗೂ ತೋಪಿನ ಬೀದಿ ಜಲಾವೃತವಾಗಿವೆ.
ಸಂಕಷ್ಟದಲ್ಲಿ ತಗ್ಗು ಪ್ರದೇಶದ ನಿವಾಸಿಗಳು ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಆಗ್ರಹ :ಕಪಿಲಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿ ದಂಡೆಯಲ್ಲಿ ವಾಸ ಮಾಡುತ್ತಿರುವ ಜನರು ಹಾಗೂ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಾಲೂಕು ಆಡಳಿತ ಸೂಚಿಸಿದೆ. ಪ್ರತಿ ವರ್ಷವೂ ಈ ನೀರಿನ ಪ್ರವಾಹದಿಂದ ನಮಗೆ ತೊಂದರೆಯಾಗುತ್ತಿದೆ. ಇಲ್ಲಿನ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಯಾವುದೇ ಶಾಶ್ವತ ಪರಿಹಾರ ನೀಡುತ್ತಿಲ್ಲ. ಮಳೆ ಬಂದಾಗ ಬರುತ್ತಾರೆ. ಸಾಂತ್ವನ ಹೇಳುತ್ತಾರೆ, ಗಂಜಿ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಧಿಕಾರಿಗಳು ಬಂದು ಭೇಟಿ ನೀಡಿ ಆಶ್ವಾಸನೆ ಕೊಡುತ್ತಾರೆ ವಿನಃ ಏನೂ ಕ್ರಮಕೈಗೊಂಡಿಲ್ಲ. ಶಾಶ್ವತ ಪರಿಹಾರ ಕೊಡಿ ಎಂದು ಶ್ರೀನಿವಾಸ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರವಾಹದ ಭೀತಿಯಲ್ಲಿ ದಕ್ಷಿಣ ಕಾಶಿ ಮನೆಗಳಿಗೆ ನೀರು ನುಗ್ಗಿದೆ, ಇದನ್ನು ಕೇಳುವವರೇ ಇಲ್ಲ. ಹೋದ ಬಾರಿ ₹10,000 ಕೊಟ್ಟಿದ್ದಾರೆ. ಅದು ಅಷ್ಟೇ ಪರಿಹಾರ, ಮಳೆ ಬಂದ ಸಮಯದಲ್ಲಿ ಬರುತ್ತಾರೆ, ಖಾಲಿ ಮಾಡಿ ಗಂಜಿಕೇಂದ್ರಕ್ಕೆ ಹೋಗಿ ಎನ್ನುತ್ತಾರೆ. ಸತ್ತಿದ್ದೀವೋ ಇಲ್ಲವೋ ಎಂದು ಕೇಳುವವರು ಇಲ್ಲ ಎಂದು ನಾಗೇಶ್ ಎಂಬುವರು ತಮ್ಮ ಕಷ್ಟ ತೋಡಿಕೊಂಡರು.