ಮೈಸೂರು: ಅಡುಗೆ ಅನಿಲ ವಿತರಣೆ ವೇಳೆಯಲ್ಲಿ ನಿಗದಿತ ಶುಲ್ಕಕ್ಕಿಂತ, ಹೆಚ್ಚು ಚಾರ್ಜಸ್ ಮಾಡಿದರೆ, ಅದಕ್ಕೆ ಸಂಬಂಧಿಸಿದ ವಿತರಕರ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ. ಅಡುಗೆ ಅನಿಲ ವಿತರಕರು ತಮ್ಮ ವ್ಯಾಪಾರದ ವ್ಯಾಪ್ತಿಯಲ್ಲಿ ಕಚೇರಿ ಅಥವಾ ಮಳಿಗೆಯಿಂದ 15 ಕಿ.ಮೀ. ವರೆಗೆ ಗ್ರಾಹಕರಿಂದ ಯಾವುದೇ ಹೆಚ್ಚುವರಿ ವಿತರಣೆ ಶುಲ್ಕ(ಡೆಲಿವರಿ ಚಾರ್ಜಸ್) ಪಡೆದರೆ, ಅಂಥ ವಿತರಕರಿಗೆ ನೀಡಿರುವ ಲೈಸೆನ್ಸ್ ರದ್ದು ಮಾಡಲಾಗುವುದು ಸೂಚನೆ ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿರುವ ಕೆಲ ಅಡುಗೆ ಅನಿಲ ವಿತರಕರು ಗ್ರಾಹಕರಿಂದ ವಿತರಣೆ ಶುಲ್ಕವನ್ನು (ಡೆಲಿವರಿ ಚಾರ್ಜಸ್) ಬಿಲ್‌ನಲ್ಲಿ ನಮೂದಿಸಿರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ಅನಧಿಕೃತವಾಗಿ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ರೀತಿ ಗ್ರಾಹಕರಿಂದ ಅಡುಗೆ ಅನಿಲ ವಿತರಣೆಗೆ ಅನಧಿಕೃತವಾಗಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಕಾನೂನು ಬಾಹಿರವಾಗಿದೆ. ಇದು ಲಿಕ್ವಿಫಿಡಿ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000 ಉಲ್ಲಂಘಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಅಡುಗೆ ಅನಿಲ ವಿತರಕರು ಲೈಸೆನ್ಸ್ ನಲ್ಲಿರುವ ತಮ್ಮ ವ್ಯಾಪಾರ ಪ್ರದೇಶದ ವ್ಯಾಪ್ತಿಯಲ್ಲಿ ಕಚೇರಿ ಅಥವಾ ಮಳಿಗೆಯಿಂದ 15 ಕಿ.ಮೀ.ವರೆಗೆ ಯಾವುದೇ ಹೆಚ್ಚುವರಿ ವಿತರಣೆ ಶುಲ್ಕವನ್ನು(ಡೆಲಿವರಿ ಚಾರ್ಜಸ್) ಪಡೆಯದೆ ಅಡುಗೆ ಅನಿಲ ವಿತರಣೆ ಮಾಡಬೇಕು. 15 ಕಿಲೋ ಮೀಟರ್ ನಂತರದ ಅಂತರಕ್ಕೆ ನಿಯಾಮಾನುಸಾರ ದರವನ್ನು ಬಿಲ್‌ನಲ್ಲಿ ನಮೂದಿಸಿ, ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ಪಡೆಯಲು ಆದೇಶಿಸಿದೆ.
ನಿಯಮಬಾಹಿರವಾಗಿ ಹೆಚ್ಚುವರಿ ವಿತರಣೆ ಶುಲ್ಕ ಪಡೆದಿರುವ ಬಗೆಗಿನ ದೂರು ಸಾಬೀತಾದಲ್ಲಿ ಅಂತರ ವಿತರಕರಿಗೆ ನೀಡಿರುವ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗುವುದೆಂದು ಆದೇಶಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರು, ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರು ಆಗಿಂದಾಗ್ಗೆ ಮೇಲ್ವಿಚಾರಣೆ, ಪರಿಶೀಲನೆ ಮಾಡಿ ವರದಿ ಮಾಡಲು ಪ್ರಕಟಣೆ ಮೂಲಕ ಸೂಚಿಸಿದ್ದಾರೆ.