ಮೈಸೂರು :ನಾಡಹಬ್ಬ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.10 ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಅರಮನೆ ಮುಂಭಾಗದಲ್ಲಿ ನಡೆಯಲಿವೆ. ಈ ಬಾರಿ ನಾಡಹಬ್ಬ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅಕ್ಟೋಬರ್ 7ರಂದು ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಗಲಿದೆ. ನಂತರ ಪ್ರತಿದಿನ ಅ.13ರವರೆಗೆ ಅರಮನೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 10ರಂದು ಅರಮನೆ ಮುಂಭಾಗದ ಸಾಂಸ್ಕೃತಿಕ ವೇದಿಕೆಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿರಂತರ 12 ಗಂಟೆ ಕಾಲ ರಾಜ್ಯದ ನೂರಾರು ಕಲಾವಿದರು ಸೇರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಆ ನಂತರ ಅ. 7 ರಿಂದ 13ರ ವರೆಗೆ ನಿತ್ಯ ಸಂಜೆ 6 ರಿಂದ ರಾತ್ರಿ 9.30ರ ವರೆಗೆ ಅರಮನೆ ಮುಂಭಾಗದ ಸಾಂಸ್ಕೃತಿಕ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಅ.11ಕ್ಕೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ
ಮೊದಲ ದಿನ ಸಂಜೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ಪ್ರಸಿದ್ಧ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಅಕ್ಟೋಬರ್ 11ರಂದು ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. 13ರಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.
ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇವಾಲಯ ಮುಂಭಾಗ 7 ದಿನ ಕಾಲ ಸಂಜೆ 7 ರಿಂದ 9 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ ಹೆಸರು ಮಾಡಿರುವ ಕಲಾವಿದರ ಪಟ್ಟಿ ತಯಾರಾಗಿದೆ. ಕೆಲವು ಕಲಾವಿದರು ತಾವೇ ಮುಂದೆ ಬಂದು ಹೆಸರು ನೋಂದಾಯಿಸಿಕೊಂಡಿದ್ದರೆ, ಇನ್ನು ಕೆಲವರ ಹೆಸರನ್ನು ಜನಪ್ರತಿನಿಧಿಗಳು ಹಾಗೂ ಇತರರು ಶಿಫಾರಸು ಮಾಡಿದ್ದಾರೆ.
ಈ ಎಲ್ಲಾ ಕಲಾವಿದರ ಹೆಸರನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಮಂಡಿಸಲಾಗುವುದು. ಈ ಬಾರಿ ದಸರಾದಲ್ಲಿ ಚಲನಚಿತ್ರ ಗೀತೆಗಳಿಗೆ ಅವಕಾಶ ಇರುವುದಿಲ್ಲ ಎಂದಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಂಬೂಸವಾರಿಗೆ ಕಳೆದ ಬಾರಿಗಿಂತ ಹೆಚ್ಚಿನ ಪ್ರೇಕ್ಷಕರಿಗೆ ಪ್ರವೇಶಾವಕಾಶ ಕಲ್ಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.