ಮೈಸೂರು: ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುವ ರೈತನ ಮೇಲೆ ಯಾವುದೇ ಕಾರಣಕ್ಕೂ ಕ್ರಿಮಿನಲ್ ಕೇಸ್ ಹಾಕಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ ಹೆಚ್.ಡಿ.ಕೋಟೆ ಇವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಸರ್ಕಾರಿ ಜಮೀನಿನಲ್ಲಿ ಅಥವಾ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವ ರೈತರನ್ನು ಒಂದು ರೀತಿ ಭೂ ಕಬಳಿಕೆದಾರರು ಎಂಬಂತೆ ನೋಡಲಾಗುತಿತ್ತು ಅವರುಗಳು ಮೇಲೆ ಕೇಸ್ ದಾಖಲಿಸಿ ರೈತರು ಬೇಲ್ಗಾಗಿ ಕೋರ್ಟಿಗೆ ಅಲೆಯಬೇಕಾಗಿತ್ತು. ಈಗ ಆ ಪರಿಸ್ಥಿತಿ ಇಲ್ಲ ಎಂದರು.
ಮೈಸೂರು ಜಿಲ್ಲೆಯ 3,060 ರೈತರಿಗೆ 2.55 ಕೋಟಿ ಬೆಳೆ ಹಾನಿ ಪರಿಹಾರ ನೀಡಲಾಗಿದೆ, 5,640 ಮನೆ ಹಾನಿ ಪ್ರಕರಣಗಳಲ್ಲಿ 45 ಕೋಟಿ ಹಾಗೂ ಕೋವಿಡ್ ನಿಂದ ಮೃತಪಟ್ಟ 3,664 ಕುಟುಂಬದವರಿಗೆ 27.35 ಕೋಟಿ ಪರಿಹಾರ ವಿತರಿಸಲಾಗಿದೆ ಎಂದರು. ವೃದ್ಧಾಪ್ಯ ವೇತನ ಪಡೆಯಲು ಆಗುತಿದ್ದ ವಿಳಂಬ ತಪ್ಪಿಸಿ ದೂರವಾಣಿ ಮುಖಾಂತರ ಹಲೋ ಕಂದಾಯ ಸಚಿವರೇ ಎಂದು ಕರೆ ಮಾಡುವ ಮೂಲಕ ಕೇವಲ 72 ಗಂಟೆಯೊಳಗಾಗಿ ವೃದ್ಧಾಪ್ಯ ಪಿಂಚಣಿ ಪಡೆಯಬಹುದಾಗಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳವರು ಮನೆ ಕಟ್ಟಲು ಭೂ ಪರಿವರ್ತನೆಗಾಗಿ ತಿಂಗಳುಗಟ್ಟಲೆ ಕಾಯಬೇಕಿಲ್ಲ, ಜಿಲ್ಲಾಧಿಕಾರಿಗಳ ಹಂತದಲ್ಲಿ ಕೇವಲ 7 ದಿನದಲ್ಲಿ ಭೂ ಪರಿವರ್ತನೆ ಆಗಲಿದೆ ಹಾಗೂ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟುವವರಿಗೆ ಆ ಜಾಗದ ಮಾಲೀಕತ್ವವನ್ನು 94 ಸಿ ಅಡಿ ನೀಡಲಾಗುವುದು ಎಂದರು.
ಎಚ್.ಡಿ ಕೋಟೆ ತಾಲೂಕು ಅರಣ್ಯ ಪ್ರದೇಶದ ಅಂಚಿನಲ್ಲಿದ್ದು ಇಲ್ಲಿ ಪ್ರಾಣಿಗಳ ಮತ್ತು ಮನುಷ್ಯನ ಸಂಘರ್ಷ ಇದೆ. ಇಂತಹ ಸಮಸ್ಯೆಗಳಿದ್ದರೂ ಜನರು ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಹಾಡಿಗಳು ಹೆಚ್ಚಾಗಿದ್ದು, ಗಿರಿಜನ ಹೆಚ್ಚಾಗಿ ವಾಸಿಸುತ್ತಾರೆ. ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ ಗ್ರಾಮಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಸ್ಥಳದಲ್ಲಿ ಮಾಶಾಸನ, ಪೌತಿ ಖಾತೆ ಬದಲಾವಣೆ, ಸೌಲಭ್ಯಗಳ ವಿತರಣೆ ಹಾಗೂ ಹಕ್ಕು ಪತ್ರಗಳ ವಿತರಣೆ ಮಾಡಲಾಗುವುದು. ಪೌತಿ ಖಾತೆ ಮಾಡುವಾಗ ಹೆಣ್ಣು ಮಕ್ಕಳ ಸಹಿ ಪಡೆಯುವುದು ಕಡ್ಡಾಯ. ಕಾರಣ ಹೆಣ್ಣು ಮಕ್ಕಳಿಗೂ ತಂದೆ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದರು. ಬಡವರು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದರೆ, ಅಂಥವರಿಗೆ 94 ಸಿ ಅಡಿಯಲ್ಲಿ ಆ ಜಾಗವನ್ನು ಅವರಿಗೆ ಖಾತೆ ಮಾಡಿ ಕೊಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನನ್ನು ಉಳಿಮೆ ಮಾಡುತ್ತಿದ್ದರೆ ಈ ಹಿಂದೆ ಕ್ರಿಮಿನಲ್ ಪ್ರಕರಣದ ದಾಖಲಿಸಲಾಗುತ್ತಿತ್ತು.
ಇದಕ್ಕೆ ತಿದ್ದುಪಡಿ ತಂದು ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಕೋಳಿ ಸಾಕಣೆ ಈ ಹಿಂದೆ ಭೂ ಪರಿವರ್ತನೆ ಮಾಡಿಸಬೇಕಿತ್ತು. ಆದರೆ, ಕಾನೂನು ತಿದ್ದುಪಡಿ ಮಾಡಿ ಕೋಳಿ ಸಾಕಣೆಯನ್ನು ಕೃಷಿ ವ್ಯಾಪ್ತಿಗೆ ತರಲಾಗಿದೆ ಎಂದರು. ಭೂಮಿಯನ್ನು ಖಾತೆ ಮಾಡಿಸಲು ಇದ್ದ 30 ದಿನಗಳ ಅವಧಿಯನ್ನು ಏಳು ದಿನಗಳಿಗೆ ಇಳಿಸಲಾಗಿದೆ.
ಎಸ್ಸಿ ಎಸ್ಟಿ ಸಮುದಾಯದವರಿಗೆ ಸರ್ಕಾರ ನೀಡಿರುವ ಜಮೀನಿನಲ್ಲಿ ಮನೆ ನಿರ್ಮಿಸಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ಇದನ್ನೂ ಓದಿ:ಬೆಂಗಳೂರು ಇದೇ ವೇಗದಲ್ಲಿಅಭಿವೃದ್ಧಿಯಾದರೆ ಆರ್ಥಿಕ ರಾಜಧಾನಿಯಾಗಿ ಮುಂಬೈ ಹಿಂದಕ್ಕಲಿದೆ: ಪಿಯೂಷ್ ಗೊಯೆಲ್