ಮೈಸೂರು : ತನ್ನ ಅಕ್ಕ ಮತ್ತು ತಂಗಿಗೆ ಇನ್ನೂ ಮದುವೆಯಾಗಿಲ್ಲ ಎಂದು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಮಹೇಶ್ ಕುಮಾರ್(28) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೃತ ಮಹೇಶ್ಗೆ ಒಬ್ಬ ತಂಗಿ ಮತ್ತು ಒಬ್ಬಳು ಅಕ್ಕ ಇದ್ದಾರೆ. ಇವರಿಬ್ಬರಿಗೂ ಇನ್ನೂ ವಿವಾಹವಾಗಿರಲಿಲ್ಲ ಎಂಬ ಚಿಂತೆ ಮಹೇಶ್ನನ್ನು ಕಾಡುತ್ತಿತ್ತು ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಮಹೇಶ್ ತಮ್ಮ ಜಮೀನಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹುಲ್ಲಹಳ್ಳಿ ಪಿಎಸ್ಐ ರಮೇಶ್ ಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಲ್ ಕಲೆಕ್ಟರ್ನ ಮೃತದೇಹ ಕೆರೆಯ ಬಳಿ ಪತ್ತೆ: ಯುವತಿಯೊಬ್ಬಳಿಗೆ ಹಣ ಕೊಡಬೇಕೆಂದು ತಾಯಿ ಬಳಿ ಹೇಳಿ ತೆರಳಿದ್ದ ಯುವಕ ಕೆರೆ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಹುಣಸೂರು ತಾಲೂಕು ಬಿಳಿಕೆರೆ ಬಳಿ ನಡೆದಿದೆ. ಕೊಳಗಟ್ಟ ಗ್ರಾಮದ ನಿವಾಸಿ ಅರುಣ್ ಕುಮಾರ್(21) ಮೃತ ಯುವಕ.
ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಅರುಣ್ ಕುಮಾರ್ ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಟಿದ್ದನು. ಮ್ಯಾನೇಜರ್ ಕರೆಯುತ್ತಿದ್ದಾರೆ ಎಂದು ಮನೆಯಿಂದ ಹೊರಟಿದ್ದ ಅರುಣ್ ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ. ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರು ಅರುಣ್ಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯೊಂದರ ಬಳಿ ಅರುಣ್ ಮೃತದೇಹ ಪತ್ತೆಯಾಗಿದೆ.