ಮೈಸೂರು:ನಾಗರಹೊಳೆ ಉದ್ಯಾನದಲ್ಲಿ ಜಿಂಕೆ ಬೇಟೆಯಾಡಿ, ಆರೋಪಿಗಳು ಜೋಳದ ಹೊಲದಲ್ಲಿ ಮಾಂಸವನ್ನು ಬಚ್ಚಿಟ್ಟಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಪರಿಕರವನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿಸಿಕೊಂಡ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ ವಿವರ:ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ, ಹಾಗು ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ನೇಗತ್ತೂರಿನ ಜೋಳದ ಹೊಲದಲ್ಲಿ, ಅಕ್ರಮವಾಗಿ ಕಾಡು ಪ್ರಾಣಿ ಮಾಂಸ ಸಂಗ್ರಹಿಸಿಟ್ಟಿದ್ದಾರೆಂದು ಖಚಿತ ಮಾಹಿತಿ ಬಂದಿತ್ತು. ಈ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದಾಗ, ಜೋಳದ ಹೊಲದಲ್ಲಿ ರಕ್ತಸಿಕ್ತವಾಗಿದ್ದ ಮೂರು ಕತ್ತಿಗಳು, ಎರಡು ಚಾಕು, ಅನತಿ ದೂರದಲ್ಲಿ ನಾಲ್ಕು ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಾಡು ಪ್ರಾಣಿಯ ಮಾಂಸ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು, ದಾಳಿಯ ಸುಳಿವರಿತು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯಸ್ಥ ಹರ್ಷಕುಮಾರ ಚಿಕ್ಕನರಗುಂದ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ, ವಲಯ ಅರಣ್ಯಾಧಿಕಾರಿಗಳಾದ ರತನ್‌ಕುಮಾರ್, ಗಣರಾಜ್ ಪಟಗಾರ್, ಡಿಆರ್‌ಎಫ್‌ಓಗಳಾದ ಸಿದ್ದರಾಜು, ಪ್ರಸನ್ನಕುಮಾರ್, ವೀರಭದ್ರಯ್ಯ, ಮನೋಹರ್, ರಾಮು ಹಾಗೂ ಗಸ್ತು ವನಪಾಲಕರಾದ ವಸಂತಕುಮಾರ, ಲಿಂಗರಾಜು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಿಂಡೇನಹಳ್ಳಿಯ ಕಾಳೇಗೌಡರ ಪುತ್ರ ಪ್ರದೀಪ್ ಆಲಿಯಾಸ್ ಕುಂಡ, ಮತ್ತು ಅಬ್ಬೂರಿನ ಕರುಣೇಗೌಡರ ಪುತ್ರ ಮಧು ಬಂಧಿತ ಆರೋಪಿಗಳು. ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.