ಮೈಸೂರು :ಸ್ನೇಹಿತನ ಕೊಲೆ ಮಾಡಿ, ಕೃತ್ಯವನ್ನು ಮತ್ತೊಬ್ಬರ ಹೆಸರಿಗೆ ಕಟ್ಟಲು ಯತ್ನಿಸಿದ ಇಬ್ಬರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದ ಸಿನಿಮೀಯ ಶೈಲಿಯ ಪ್ರಕರಣ ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಒಂದೇ ದಿನದಲ್ಲಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ :ಅಂತರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಬೀಚನಹಳ್ಳಿಯ ಯುವಕ ಭಾನುಪ್ರಕಾಶ್ ಅಲಿಯಾಸ್ ಸಿದ್ದು ಎಂಬಾತ ಮಹಿಳೆಯೊಬ್ಬರಿಗೆ ಮೆಸೇಜ್ ಮಾಡಿದ್ದ ಎಂಬ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ಗ್ರಾಮದಲ್ಲೆಲ್ಲ ಸುದ್ದಿ ಹರಡಿತ್ತು. ಬಳಿಕ ಗ್ರಾಮಸ್ಥರೇ ನ್ಯಾಯ ಪಂಚಾಯಿತಿ ಮಾಡಿ ಪ್ರಕರಣ ಬಗೆಹರಿಸಿದ್ದರು. ಆದರೆ, ಆ ಘಟನೆ ಆದ ದಿನ ರಾತ್ರಿ ಅಂದರೆ ಬುಧವಾರ (ಆಗಸ್ಟ್ 30) ಭಾನುಪ್ರಕಾಶ್ ಹತ್ಯೆಯಾಗಿದ್ದ. ಮಹಿಳೆಗೆ ಮೆಸೇಜ್ ಮಾಡಿದ ಎಂಬ ಸೇಡಿಗಾಗಿ ಹತ್ಯೆ ಮಾಡಲಾಗಿದೆ. ಭಾನುಪ್ರಕಾಶ್ ಸ್ನೇಹಿತರಾದ ದಿನೇಶ್ ಮತ್ತು ಭೀಮ ಎಂಬುವರೇ ಆರೋಪಿಗಳಾಗಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇರೊಬ್ಬರ ಮೇಲೆ ಕೊಲೆ ಆರೋಪ ಹೊರಿಸಲು ಸಂಚು:ಭಾನುಪ್ರಕಾಶ್ ಹತ್ಯೆಯನ್ನು ಆತನ ಸ್ನೇಹಿತರು ಮಹಿಳೆಗೆ ಮೆಸೇಜ್ ಮಾಡಿದ ಕಾರಣಕ್ಕೆ ಮಾಡಿರಬಹುದು ಎಂದುಕೊಂಡಿದ್ದ ಪೋಲಿಸರು, ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಾಗ ನಿಜ ಸಂಗತಿ ಹೊರಬಂದಿದೆ. ಬೀಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರಕಾಶ್ ಎಂಬುವರು ತಮಗೆ ಮನೆಯನ್ನು ಮಂಜೂರು ಮಾಡಿಕೊಡಲಿಲ್ಲ ಎಂಬ ಕಾರಣದಿಂದ ಅವರ ಜೊತೆ ಆರೋಪಿಗಳಾದ ನೆರಳೆ ಗ್ರಾಮದ ದಿನೇಶ್ ಮತ್ತು ಭೀಮ ಹಗೆ ಸಾಧಿಸುತ್ತಿದ್ದರು. ಇದೇ ವಿಚಾರ ಬಳಸಿಕೊಂಡು ತಮ್ಮ ಸ್ನೇಹಿತ ಭಾನುಪ್ರಕಾಶ್ನನ್ನು ಕೊಲೆ ಮಾಡಿದ್ದಾರೆ ಎಂದು ಪ್ರಕಾಶ್ ಮೇಲೆ ಆರೋಪ ಹೊರಿಸಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.