ಮೈಸೂರು: ನಂಜನಗೂಡಿನ ನೀಲಕಂಠ ನಗರದಲ್ಲಿ ಭಾನುವಾರ ಸಂಜೆ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಪ್ರಕರಣ ಸಂಬಂಧ ಐವರ ವಿರುದ್ಧ ನಂಜನಗೂಡು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪೈಕಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣವೇನು?: ನಗರದ ಸರ್ಕಲ್ನಲ್ಲಿ ಅಂದು ಸಂಜೆ ಸ್ಥಳೀಯ ಯುವಕರ ಗುಂಪೊಂದು ಸ್ನೇಹಿತನೊಬ್ಬನ ಹುಟ್ಟುಹಬ್ಬ ಆಚರಿಸುತ್ತಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಮತ್ತೊಂದು ಯುವಕರ ಗುಂಪು, ಪ್ರಸಾದ್ ಎಂಬ ಯುವಕನಿಗೆ ಚಾಕುವಿನಿಂದ ಇರಿದು, ಹಲ್ಲೆ ಮಾಡಿ ಪರಾರಿಯಾಗಿತ್ತು. ಪ್ರಕರಣ ಸಂಬಂಧ ನಂಜನಗೂಡು ನಗರ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯರು ಸೋಮವಾರ ಠಾಣೆಯ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಘಟನೆ ಸಂಬಂಧ ಇದೀಗ ಅದೇ ಬಡಾವಣೆಯ ಇಲ್ಲು, ಶೋಯಬ್, ಜಾಫರ್, ಸಲ್ಮಾನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಶಾಯಿನ್ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಗಾಯಾಳು ನೀಡಿದ ಹೇಳಿಕೆ: "ಘಟನೆ ನಡೆದ ದಿನ ನಾನು ಅದೇ ಏರಿಯಾದಲ್ಲಿರುವ ನಮ್ಮ ಮನೆಯಿಂದ ಬಜ್ಜಿ ತಿನ್ನಲು ಸರ್ಕಲ್ಗೆ ತೆರಳಿದ್ದೆ. ಅಲ್ಲಿ ನನಗೆ ಪರಿಚಿತರಾದ ಯುವಕರ ಗುಂಪೊಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿತ್ತು. ನಾನೂ ಭಾಗಿಯಾಗಿದೆ. ಮತ್ತೊಂದು ಯುವಕ ಗುಂಪು ಕೂಡ ಅಲ್ಲಿಗೆ ಬಂದಿತ್ತು. ಗುಂಪಿನಲ್ಲಿದ್ದ ಓರ್ವ ಭಾರತ್ ಮಾತಾ ಕೀ ಜೈ ಎಂದು ಕೂಗಿದ. ಅಲ್ಲೇ ಇದ್ದ ಯುವಕರ ಗುಂಪು ಹುಟ್ಟುಹಬ್ಬಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ಜಗಳ ಮಾಡಲು ಆರಂಭಿಸಿತು. ಪಕ್ಕದಲ್ಲಿ ನಿಂತಿದ್ದ ನನ್ನನ್ನು ಒಂದು ಗುಂಪು ಎಳೆದುಕೊಂಡು ಹಲ್ಲೆ ಮಾಡಿತು. ಆ ಸಂದರ್ಭದಲ್ಲಿ ನಾನು ಪ್ರಜ್ಞೆ ತಪ್ಪಿ ಬಿದ್ದೆ. ತಕ್ಷಣ ನನ್ನನ್ನು ಯಾರೋ ಆಸ್ಪತ್ರೆಗೆ ಸೇರಿಸಿದರು. ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ" ಎಂದು ಗಾಯಾಳು ಪ್ರಸಾದ್ ಹೇಳಿದ್ದಾರೆ.