ಮೈಸೂರು: ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಪತಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ನಗರದ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಕೆಎಸ್‌ಆರ್‌ಟಿಸಿ ಲೇಔಟ್ ನಿವಾಸಿ ಲೋಕೇಶ್ ಆರಾಧ್ಯ ಆರೋಪಿಯಾಗಿದ್ದು, ಪತ್ನಿ ಪಲ್ಲವಿ ಹತ್ಯೆಯಾದ ರ್ದುದೈವಿ.
ಲೋಕೇಶ್ ಮತ್ತು ಪಲ್ಲವಿ ಅವರು 9 ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ 7 ವರ್ಷದ ಮಗನಿದ್ದು, ಕೆಲಕಾಲ ಈ ದಂಪತಿ ಮೈಸೂರು ತಾಲೂಕಿನ ವರುಣಾದಲ್ಲಿ ವಾಸವಾಗಿದ್ದರು. ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂಬ ಕಾರಣದಿಂದ ಕಳೆದ 2 ತಿಂಗಳ ಹಿಂದೆ ಮೈಸೂರಿಗೆ ಬಂದು ಕೆಎಸ್‌ಆರ್‌ಟಿ ಬಡವಾಣೆಯಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ಇದ್ದರು.
ಆರೋಪಿ ಪತಿ ಲೋಕೇಶ್ ಆಗ್ಗಾಗೆ ತನ್ನ ಹೆಂಡತಿಯ ಶೀಲವನ್ನು ಶಂಕಿಸಿ ಜಗಳ ಮಾಡುತ್ತಿದ್ದರು. ಕಳೆದ 15 ದಿನದ ಹಿಂದೆಯೂ ಇಬ್ಬರ ನಡುವೆ ದೊಡ್ಡ ಜಗಳವಾಗಿದ್ದು, ಪಲ್ಲವಿ ಅವರ ತಾಯಿ ಮತ್ತು ಸೋದರ ಮಾವ ಬಂದು ರಾಜೀ ಸಂಧಾನ ಮಾಡಿ, ಇಬ್ಬರಿಗೂ ಬುದ್ದಿವಾದ ಹೇಳಿ, ಮನೆಯ ಬಾಡಿಗೆಗೆ ಹಣವನ್ನೂ ನೀಡಿ ಹೋಗಿದ್ದರು.
ಆದರೂ, ಸರಿಯಾಗದ ಲೋಕೇಶ್ ಆರಾಧ್ಯ ನಿನ್ನೆಯ(ಗುರುವಾರ) ಬೆಳಗಿನ ಜಾವ ತನ್ನ ಹೆಂಡತಿ ಪಲ್ಲವಿಯ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಪಲ್ಲವಿ ಅವರ ತಂದೆ ಆಲನಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಆರೋಪಿ ಲೋಕೇಶ್‌ನ ಶೋಧ ನಡೆಸುವಾಗ ಆತನೇ ಸ್ವತಃ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಕರಣದ ಕುರಿತು ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.
ಸೋದರಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ:ಸೋದರಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಸಹೋದರ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಆ ಯುವಕನನ್ನೇ ದಾರುಣವಾಗಿ ಕೊಲೆ ಮಾಡಿರುವ ಘಟನೆ ಬೆಳವಾಡಿ ಮತ್ತು ಗದ್ದಿಗೆ ಮುಖ್ಯ ರಸ್ತೆಯ ಬಸನವನಹಳ್ಳಿಯ ಬಳಿ ಗುರುವಾರ ರಾತ್ರಿ ನಡೆದಿದೆ. ಬೆಳವಾಡಿಯ ಸ್ವಾಮಿ (23) ಕೊಲೆಯಾದ ಯುವಕ.
ಈತನನ್ನು ಅದೇ ಗ್ರಾಮದ ಸಾಗರ್ (ಸಹೋದರ) ಎಂಬಾತ ಮತ್ತು ಆತನ ಸ್ನೇಹಿತರಾದ ಮಂಜು, ಪ್ರತಾಪ್‌ರೊಂದಿಗೆ ಸೇರಿ ಹತ್ಯೆ ಮಾಡಿದ್ದಾರೆ. ಸಾಗರ್‌ನ ಸೋದರಿಯನ್ನು ಕೊಲೆಯಾದ ಸ್ವಾಮಿ ಪ್ರೀತಿಸುತ್ತಿದ್ದು, ಈ ವಿಷಯವಾಗಿ ಸಾಗರ್ ಮತ್ತು ಸ್ವಾಮಿ ನಡುವೆ ಜಗಳವಾಗಿದೆ. ಇದೇ ವಿಷಯಕ್ಕೆ ಸ್ವಾಮಿ ವಿರುದ್ಧ ಹಗೆ ಸಾಧಿಸುತ್ತಿದ್ದ ಸಾಗರ್, ಸ್ನೇಹಿತರೊಂದಿಗೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದಾನೆ.
ಗುರುವಾರ ರಾತ್ರಿ ಸುಮಾರಿ 7 ಗಂಟೆ ಸಮಯದಲ್ಲಿ ಸ್ವಾಮಿ, ಸುಶಾಂತ್‌ನೊಂದಿಗೆ ಸೂಟ್ಕರ್‌ನಲ್ಲಿ ಬೆಳವಾಡಿ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬೈಕಿನಲ್ಲಿ ಮಂಜು ಮತ್ತು ಪ್ರತಾಪ್‌ನೊಂದಿಗೆ ಬಂದ ಸಾಗರ್ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾನೆ. ಜೊತೆಗೆ ಮೂವರು ಸೇರಿಕೊಂಡು ಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು, ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾರೆ. ಅಲ್ಲದೇ ಕೆಳಗೆ ಬಿದ್ದ ಸ್ವಾಮಿಯ ತಲೆ ಮೇಲೆ ಐದು ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಹಾಕಿ ತಲೆಯನ್ನು ಜಜ್ಜಿ ಹಾಕಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಸ್ವಾಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಸ್ವಾಮಿ ಜೊತೆಗಿದ್ದ ಸುಶಾಂತ್ ಗಾಬರಿಯಿಂದ ಅಲ್ಲೇ ನಿಂತಿದ್ದು, ಸಾಗರ್ ಸೇರಿದಂತೆ ಮೂವರು ಬೈಕಿನಲ್ಲಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಮುತ್ತುರಾಜು, ಜಾಹ್ನವಿ, ಎಸಿಪಿ ಗಜೇಂದ್ರ ಪ್ರಸಾದ್, ವಿಜಯ ನಗರ ಠಾಣೆಯ ಇನ್ಸ್‌ಪೆಕ್ಟರ್ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪಕ್ಕದ್ಮನೆ ಯುವಕನೊಂದಿಗೆ ಮಾತಾಡ್ಬೇಡ ಎಂದ ಪತಿಯ ಗುಪ್ತಾಂಗಕ್ಕೆ ಬಿಸಿಎಣ್ಣೆ ಸುರಿದ ಪತ್ನಿ