ಕರ್ನಾಟಕ

karnataka

ETV Bharat / state

ಒಂದೇ ಕುಟುಂಬದ ನಾಲ್ವರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ.. ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ - ರಮೇಶ್ ಬಾನೋತ್

ಮೈಸೂರಿನ ಚಾಮುಂಡಿಪುರಂನಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆಯಾಗಿವೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಮೈಸೂರು
ಮೈಸೂರು

By ETV Bharat Karnataka Team

Published : Aug 27, 2023, 5:56 PM IST

Updated : Aug 27, 2023, 8:47 PM IST

ಮೈಸೂರು:ಒಂದೇ ಕುಟುಂಬದ ನಾಲ್ವರು ಮನೆಯಲ್ಲಿಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ನಗರದ ಚಾಮುಂಡಿ ಪುರಂನಲ್ಲಿ ನಡೆದಿದೆ. ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಲಭಾದೆಯಿಂದಲೇ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ನಗರದ ಚಾಮುಂಡಿಪುರಂನ ಮನೆಯಲ್ಲಿ ಮಹದೇವ ಸ್ವಾಮಿ (48), ಇವರ ಪತ್ನಿ ಅನಿತಾ(35), 17 ಹಾಗೂ 15 ವರ್ಷ ವಯಸ್ಸಿನ ಪುತ್ರಿಯರು ಶವವಾಗಿ ಪತ್ತೆಯಾದವರು. ಮಹದೇವ ಸ್ವಾಮಿ ಶವ ಮನೆಯ ಹಾಲ್​ನಲ್ಲಿ ಪತ್ತೆಯಾಗಿದ್ದರೆ, ಹೆಂಡತಿ ಅನಿತಾ ಮೃತದೇಹ ಕುರ್ಚಿಯ ಮೇಲೆ, ದೊಡ್ಡ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಚಿಕ್ಕ ಮಗಳ ಶವ ಕೊಠಡಿಯಲ್ಲಿ ಪತ್ತೆಯಾಗಿದೆ.

ಭಾನುವಾರ ಮಧ್ಯಾಹ್ನ ಮನೆಯಿಂದ ಕೊಳೆತ ವಾಸನೆ ಬರುತ್ತಿದ್ದಂತೆಯೇ ನೆರೆಯ ವಾಸಿಗಳು ಅನುಮಾನಗೊಂಡು, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಾಲ್ವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೂಲತಃ ಜಯಪುರ ಹೋಬಳಿ ಬರಡನಪುರ ಗ್ರಾಮದವರಾದ ಮಹದೇವಸ್ವಾಮಿ ಬಂಡಿಪಾಳ್ಯದಲ್ಲಿ ತರಕಾರಿ ದಲ್ಲಾಳಿಯಾಗಿದ್ದರು. ವಿದ್ಯಾರಣ್ಯಪುರಂನಲ್ಲಿ ವಾಸವಾಗಿದ್ದ ಅವರು ಎರಡು ತಿಂಗಳ ಹಿಂದೆಯಷ್ಟೇ ಚಾಮುಂಡಿಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಮುತ್ತುರಾಜು, ಬಿ.ಟಿ. ಜಾಹ್ನವಿ, ಎಸಿಪಿ ಗಂಗಾಧರ ಸ್ವಾಮಿ, ಕೆ.ಆರ್. ಠಾಣೆ ಇನ್ಸ್​ಪೆಕ್ಟರ್ ನಾಗೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಎಫ್​ಎಸ್ಎಲ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಹುಣಸೂರಿನಲ್ಲಿರುವ ಅನಿತಾ ಅವರ ಪೋಷಕರು ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಈ ಸಂಬಂಧ ಕೆ.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಒಂದೇ ಕುಟುಂಬದ ನಾಲ್ವರು ಮೃತಪಟ್ಟು 2 ರಿಂದ 3 ದಿನಗಳು ಕಳೆದಿದೆ. ಶವಗಳು ಕೊಳೆತಿದ್ದು, ಎಫ್​ಎಸ್ಎಲ್ ತಂಡ ಪರಿಶೀಲನೆ ನಡೆಸಿದೆ. ತನಿಖೆಯ ಬಳಿಕ ಘಟನೆಗೆ ನಿಖರ ಕಾರಣಗಳು ತಿಳಿಯಲಿದೆ ಎಂದು ತಿಳಿಸಿದ್ದಾರೆ.

ತಂದೆ ಕೂಡ ಆತ್ಮಹತ್ಯೆ: ಮೃತ ಮಹದೇವಸ್ವಾಮಿ ಅವರ ತಂದೆ ಸೋಮಪ್ಪ ಕೂಡ ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹದೇವಸ್ವಾಮಿ ಅವರ ಹಣಕಾಸಿನ ಪರಿಸ್ಥಿತಿ ಬಗ್ಗೆ ಮಾಹಿತಿ ಇರಲಿಲ್ಲ. ಸಾಲ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಮೃತನ ಸೋದರ ಅಶೋಕ್ ಹೇಳುತ್ತಾರೆ. ಮಹದೇವಸ್ವಾಮಿ ನಮ್ಮಂದಿಗೆ ಹೆಚ್ಚು ಸಂಪರ್ಕದಲ್ಲಿ ಇರಲಿಲ್ಲ ಎಂದು ಚಿಕ್ಕಮ್ಮ ವಿಶಾಲಕ್ಷಿ ಮಾಹಿತಿ ನೀಡಿದರು.

ಇದನ್ನೂ ಓದಿ :ಕಲಬುರಗಿ: ಪಬ್ ಜಿ ಆಟದಲ್ಲಿ ಹಣ ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

Last Updated : Aug 27, 2023, 8:47 PM IST

ABOUT THE AUTHOR

...view details