ಮೈಸೂರು:ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದೆ. ಮೈಸೂರು ತಾಲೂಕಿನ ನಗರ್ತಹಳ್ಳಿ ಗ್ರಾಮದ ರಮೇಶ ನಾಯಕ ಎಂಬುವರೇ ಶಿಕ್ಷೆಗೆ ಗುರಿಯಾದ ಅಪರಾಧಿ. ಇವರು ತಮ್ಮ ಪತ್ನಿ ಕುಮಾರಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆಗೆ ಗುರಿಯಾಗಿದ್ದಾರೆ.
ಕುಡಿತದ ಚಟಕ್ಕೆ ದಾಸನಾಗಿದ್ದ ರಮೇಶ ನಾಯಕ ನಿತ್ಯ ಪತ್ನಿ ಕುಮಾರಿಯೊಂದಿಗೆ ಗಲಾಟೆ ಜೊತೆಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದರು. ಈ ಬಗ್ಗೆ ನೆರೆಹೊರೆ ನಿವಾಸಿಗಳು ಸಾಕಷ್ಟು ಬುದ್ಧಿವಾದ ಹೇಳಿದ್ದರು. ಆದರೆ ರಮೇಶ ತನ್ನ ಚಾಳಿ ಮುಂದುವರೆಸಿದ್ದ. ಕಳೆದ 2021 ಫೆ. 25 ರಂದು ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡು ಪತ್ನಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಈ ಜೀವಾವಧಿ ಶಿಕ್ಷೆಯ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ. ಎಸ್. ಮಂಜುಳ ವಾದ ಮಂಡಿಸಿದ್ದರು.
ಅನೈತಿಕ ಸಂಬಂಧ ಅನುಮಾನ.. ಜೋಡಿ ಕೊಲೆ: ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಜೋಡಿ ಕೊಲೆ ನಡೆದು ಜನರನ್ನು ಬೆಚ್ಚಿ ಬೀಳಿಸಿತ್ತು. ಅಕ್ಕತಂಗೇರಹಾಳ ಗ್ರಾಮದಲ್ಲಿ ರೇಣುಕಾ ಮಾಳಗಿ, ಮಲ್ಲಿಕಾರ್ಜುನ ಜಗದಾರ್ ಎಂಬುವರ ಕೊಲೆ ನಡೆದಿತ್ತು. ಅಸಲಿಗೆ ಈ ಕೊಲೆ ಮಾಡರುವುದು ರೇಣುಕಾ ಪತಿ ಯಲ್ಲಪ್ಪ. ತನ್ನ ಪತ್ನಿ ಮಲ್ಲಿಕಾರ್ಜುನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಎರಡು ದಿನಗಳ ಹಿಂದೆಯಷ್ಟೇ ಕಾಡಲು ಆರಂಭಿಸಿತ್ತು. ಇದರಿಂದ ಆಕ್ರೋಶಗೊಂಡಿದ್ದ ಯಲ್ಲಪ್ಪ ಗೋಕಾಕ್ ನಗರಕ್ಕೆ ಹೋಗಿ ಒಂದು ಕುಡಗೋಲು ಖರೀದಿಸಿ ಅದಕ್ಕೆ ಸಾಣಿಯನ್ನೂ ಹಿಡಿಸಿದ್ದ. ಬಳಿಕ ಕಂಠಪೂರ್ತಿ ಸಾರಾಯಿ ಕುಡಿದು ಊರಿಗೆ ಬಂದಿದ್ದ.
ಇದೇ ವೇಳೆ ಮನೆ ಮುಂದೆ ಸ್ನಾನ ಮಾಡುತ್ತಿದ್ದ ಮಲ್ಲಿಕಾರ್ಜುನನ ನೋಡಿ ಮತ್ತಷ್ಟು ಕುಪಿತನಾಗಿದ್ದ. ಮಲ್ಲಿಕಾರ್ಜುನ ಮುಖಕ್ಕೆ ಸೋಪ್ ಹಾಕುವವರೆಗೆ ಕಾದು ನಿಂತು, ಮುಖಕ್ಕೆ ಸೋಪ್ ಹಾಕುತ್ತಿದ್ದಂತೆ ಆತನ ಕುತ್ತಿಗೆ ಭಾಗಕ್ಕೆ ಕುಡಗೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಅದೇ ಸಿಟ್ಟಿನಲ್ಲಿ ಮನೆಗೆ ಬಂದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಳಗಾವಿ: ಪತ್ನಿ, ಪ್ರಿಯಕರನ ಕೊಂದ ಪತಿ... ಜೋಡಿ ಕೊಲೆಗೆ ಬೆಚ್ಚಿಬಿದ್ದ ಗ್ರಾಮ