ಮೈಸೂರು:ಯುವಕರ ಅಪಾಯಕಾರಿ ಬೈಕ್ ವೀಲಿಂಗ್ ಕ್ರೇಜ್‌ನಿಂದಾಗಿ ಶಿಕ್ಷಕಿಯೋರ್ವರು ಗಂಭೀರವಾಗಿ ಗಾಯಗೊಂಡು ಇದೀಗ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಘಟನೆ ನಡೆದಿದೆ. ಪೊಲೀಸ್ ಪಬ್ಲಿಕ್ ಸ್ಕೂಲ್ ವಿಜ್ಞಾನ ಶಿಕ್ಷಕಿ ಎಚ್.ಬಿ.ಅನಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜುಲೈ 18ರಂದು ಶಿಕ್ಷಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದರು. ಗಾಯತ್ರಿಪುರಂ ಚರ್ಚ್ ಸಮೀಪ ಮೂವರಿದ್ದ ಕೆಟಿಎಂ ಬೈಕ್ ವೇಗವಾಗಿ ಬಂದು ಶಿಕ್ಷಕಿ ಸಂಚರಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಶಿಕ್ಷಕಿಯ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿ ರಸ್ತೆಗೆ ಬಿದ್ದಿದ್ದರು. ತಕ್ಷಣವೇ ಸಾರ್ವಜನಿಕರು ಅಪಲೋ ಆಸ್ಪತ್ರೆಗೆ ದಾಖಲಿಸಿದ್ದರು. ಸವಾರರು ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದರು.
ಯುವಕರು ವೀಲಿಂಗ್ ಮಾಡಿದ ಬೈಕ್ ಮೈಸೂರಿನ ಕುರುಬರಹಳ್ಳಿಯ ಆದಿತ್ಯ ಎಂಬವರ ಹೆಸರಿನಲ್ಲಿದೆ. ಗಾಯಾಳು ಶಿಕ್ಷಕಿಯು ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೈಸೂರು ನಗರ ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ:Chikkamagaluru accident: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ.. ಇಬ್ಬರು ಸ್ಥಳದಲ್ಲೇ ಸಾವು
ಬೈಕ್ ಸ್ಕಿಡ್, ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು: ಮಂಗಳೂರಿನ ಹೊರವಲಯ ಅಡ್ಯಾರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ (19/07/2023) ಇಂಜಿನಿಯರಿಂಗ್ ವಿದ್ಯಾರ್ಥಿ ಬೈಕ್ನಲ್ಲಿ ತೆರಳುತ್ತಿದ್ದಾಗ, ಸ್ಕಿಡ್ ಆಗಿ ಸವಾರ ಮೇಲಕ್ಕೆ ಚಿಮ್ಮಿ ವಿದ್ಯುತ್ ಕಂಬಕ್ಕೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮೃತ ವಿದ್ಯಾರ್ಥಿ ಮೂಲತಃ ಕೇರಳದವನಾಗಿದ್ದು, ಮಂಗಳೂರಿನ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತಪಟ್ಟ ಮಹಮ್ಮದ್ ನಶತ್ ಪಡೀಲ್‌ನಿಂದ ವಲಚ್ಚಿಲ್ ಕಡೆಗೆ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ. ಈ ವೇಳೆ ಬೈಕ್ ಸ್ಕಿಡ್ ಆಗಿ ಡಿವೈಡರ್ಗೆ ಬಡಿದು ಅಪಘಾತ ಸಂಭವಿಸಿದೆ.
ಕಾರು ಬೈಕ್ ಡಿಕ್ಕಿ , ಇಬ್ಬರು ಸಾವು:ಚಿಕ್ಕಮಗಳೂರಿನ ಕಡೂರು ಜಿಲ್ಲೆಯಲ್ಲಿ (14/07/2023) ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿತ್ತು. ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಲ್ಲದೇ, ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೃತರನ್ನು ಹೊಸದುರ್ಗ ತಾಲೂಕಿನ ಅಗಲಕೆರೆ ಗ್ರಾಮದ ಲೋಹಿತ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಮಾರ್ಗದಿಂದ ಕಡೂರು ಪಟ್ಟಣದ ಕಡೆಗೆ ಬೈಕ್ನಲ್ಲಿ ಬರುತ್ತಿದಾಗ ಅಪಘಾತ ಸಂಭವಿಸಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.
ಇದನ್ನೂ ಓದಿ:ಬೈಕ್ ಸ್ಕಿಡ್ ಆಗಿ ಡಿವೈಡರ್ಗೆ ಬಡಿದು ಭೀಕರ ಅಪಘಾತ: ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು