ಮೈಸೂರು : ಚಾರ್ಜಿಂಗ್ ಪಾಯಿಂಟ್ಗೆ ಅನುಮತಿ ನೀಡಲು ವಿದ್ಯುತ್ ನಿಗಮದ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬರಿಂದ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಂದು (ಶುಕ್ರವಾರ) ಮೈಸೂರು ನಗರದ ವಿಜಯನಗರ ಬಡಾವಣೆಯಲ್ಲಿ ಅಧಿಕಾರಿ ವಾಸವಿರುವ ಮನೆಯಲ್ಲೇ ಘಟನೆ ನಡೆದಿದೆ. ಲೋಕಾಯುಕ್ತ ಪೊಲೀಸ್ ಅಧಿಕಾರಿ, ಅಶೋಕ್ ಕುಮಾರ್ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ವಿವರ: ಕುಶಾಲನಗರದ ವಿದ್ಯುತ್ ನಿಗಮ ಮಂಡಳಿಯಲ್ಲಿ ಎಇಇ ಆಗಿ ಆಶೋಕ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಕ್ತಿಯೊಬ್ಬ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲು ಅನುಮತಿ ಪಡೆಯಲು ಬಂದಾಗ, ಆತನಿಗೆ ಆಶೋಕ್ ಕುಮಾರ್ ಅವರು 5 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ, ಬೇಡಿಕೆ ಇಟ್ಟಿದ್ದ ಹಣದಲ್ಲಿ 2 ಲಕ್ಷ ರೂ. ಲಂಚವನ್ನು ಎಇಇ ವಾಸವಿರುವ ಮೈಸೂರಿನ ನಿವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಶೋಕ್ ಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿ ಸುರೇಶ್ ಬಾಬು, ಡಿವೈಎಸ್ಪಿ ಪವನ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಲೋಕೇಶ್ ಸೇರಿದಂತೆ ಹಲವು ಸಿಬ್ಬಂದಿ ಇದ್ದರು.
ಎಂಜಿನಿಯರ್ಗಳು ಅಮಾನತು: ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವಂತೆ ಕರ್ತವ್ಯ ಲೋಪವೆಸಗಿದ ಇಬ್ಬರು ಅಧಿಕಾರಿಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕ್ರಮ ಜರುಗಿಸಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವೆಸಗುವಂತೆ ಕರ್ತವ್ಯ ಲೋಪ ಎಸಗಿದ ಇಬ್ಬರು ಎಂಜಿನಿಯರ್ಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ತುಮಕೂರಿನ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ ವಿಳಂಬ ಧೋರಣೆ, ಬೇಜವಾಬ್ದಾರಿ ಹಾಗೂ ಕರ್ತವ್ಯ ನಿರ್ಲಕ್ಷತೆಯಿಂದ ಸುಮಾರು 2.76 ಕೋಟಿ ರೂ. ನಷ್ಟಕ್ಕೆ ನೇರ ಕಾರಣವಾಗಿದ್ದ ಕಾರ್ಯಪಾಲಕ ಇಂಜಿನಿಯರ್ ಎಸ್.ಆರ್. ಹರೀಶ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.
ಇದನ್ನೂ ಓದಿ :ಮಾಡಾಳ್ ವಿರುಪಾಕ್ಷಪ್ಪ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಲು ಲೋಕಾಯಕ್ತ ಚಿಂತನೆ
ಹಾಗೆಯೇ, ಯಾದಗಿರಿಯ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ 41 ವಿವಿಧ ಕಾಮಗಾರಿಗಳಲ್ಲಿ ಕರ್ತವ್ಯ ಲೋಪವೆಸಗಿ ಸರ್ಕಾರಕ್ಕೆ ಒಟ್ಟು 1.3 ಕೋಟಿ ರೂ. ನಷ್ಟ ಮಾಡಿದ್ದ ಕಾರ್ಯಪಾಲಕ ಇಂಜಿನಿಯರ್ ಬಸವರಾಜ ಕೆ.ಹಲಚೇರ್ ಎಂಬವರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಭ್ರಷ್ಟರಿಗೆ ಹಾಗೂ ಕರ್ತವ್ಯ ಲೋಪವೆಸಾಗುವವರಿಗೆ ತಮ್ಮ ಇಲಾಖೆಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಸಚಿವ ಖರ್ಗೆ ಈ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ :ಲಂಚ ಪ್ರಕರಣ: ಜೂನ್ 23 ರವರೆಗೆ ವಾಂಖೆಡೆಗೆ ಮಧ್ಯಂತರ ರಕ್ಷಣೆ ವಿಸ್ತರಿಸಿದ ಬಾಂಬೆ ಹೈಕೋರ್ಟ್