ಮೈಸೂರು: ನಂಜನಗೂಡು ತಾಲೂಕು ಹಿಮ್ಮಾವಿನಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿದ್ದ 9 ಮಂದಿ ಹಾಗೂ ದಾಖಲೆಗಳನ್ನು ಪರಿಶೀಲಿಸದೇ ಕರ್ತವ್ಯ ಲೋಪವೆಸಗಿದ್ದ 7 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳು ಆದೇಶಿಸಿದ ಹಿನ್ನೆಲೆಯಲ್ಲಿ ನಂಜನಗೂಡು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ರಿಮಿನಲ್ ಕೇಸ್ : ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ತನಿಖೆ ಮಾಡುವಂತೆ ಆದೇಶ ಮಾಡಿದ್ದು, ಅದಕ್ಕೆ ಪೂರಕವಾಗಿ ನಂಜನಗೂಡು ತಾಲೂಕಿನ ಹಿಂದಿನ ತಹಸೀಲ್ದಾರ್ ನವೀನ್ ಜೋಸೆಫ್ ಸೇರಿದಂತೆ 16 ಮಂದಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ. ನಂಜನಗೂಡು ಹಾಲಿ ತಹಸೀಲ್ದಾರ್ ಶಿವಮೂರ್ತಿ ನೀಡಿದ ದೂರಿನನ್ವಯ ಪೋಲಿಸರು ಭೂ ನ್ಯಾಯ ಮಂಡಳಿ ಹಿಂದಿನ ಅಧ್ಯಕ್ಷ ಕೃಷ್ಣಮೂರ್ತಿ, ಭೂ ನ್ಯಾಯ ಮಂಡಳಿ ಸದಸ್ಯ ಕಾರ್ಯದರ್ಶಿ ಆಗಿದ್ದ ನಂಜನಗೂಡು ತಾಲೂಕಿನ ಹಿಂದಿನ ತಹಸೀಲ್ದಾರ್ ನವೀನ್ ಜೋಸೆಫ್, ಹಿಂದಿನ ಅಧಿಕಾರಿಗಳಾದ ಆರ್ ಆರ್ ಟಿ ಶಿರಸ್ತೇದಾರ್ ರಮೇಶ್ ಬಾಬು, ರಾಜಸ್ವ ನಿರೀಕ್ಷಕ ಶಿವರಾಜು, ಗ್ರಾಮ ಲೆಕ್ಕಿಗ ವೆಂಕಟೇಶ್ ಕರ್ತವ್ಯದಲ್ಲಿ ಲೋಪ ಎಸಗಿರುವುದಕ್ಕೆ ಅವರ ವಿರುದ್ಧ ದೂರು ದಾಖಲಿಸಿದೆ.
ಸುಳ್ಳು ದಾಖಲೆ ನೀಡಿ ಭೂ ಮಂಜೂರಾತಿ ಮಾಡಿಸಿಕೊಂಡಿರುವ ಪಿ. ಕೃಷ್ಣಾನಂದ ಗಿರಿ ಗೋಸ್ವಾಮಿ, ಭೀಷ್ಮ ಪಿತಾಮಹ ಅವರ ಪುತ್ರಿ ಶೋಭಾದೇವಿ, ಹೇಮಲತಾ, ನಿಷಾ ಶರ್ಮಾ, ಅಂಜನಾ ಶರ್ಮ, ವಿಜಯಲಕ್ಷ್ಮಿ, ಸುಳ್ಳು ವಂಶವೃಕ್ಷ ನೀಡಿ ಖಾತೆ ಮಾಡಿಸಿಕೊಂಡಿರುವ ಪ್ರತೀಪ್ ಮಗ್ತು ಎಂಬುವವರ ವಿರುದ್ದ ದಂಡ ಸಂಹಿತೆ 406,409,420,465,468,471, 120ಬಿ,149,ಕರ್ನಾಟಕ ಲ್ಯಾಂಡ್, ರೆವಿನ್ಯೂ ಆಕ್ಟ್ 1964 ಸೆಕ್ಷನ್ 192 ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಭೂ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲು:ನಂಜನಗೂಡಿನ ತಾಲೂಕು ಚಿಕ್ಕಾಯ್ಯನ ಛತ್ರ ಹೋಬಳಿ ಹಿಮ್ಮವು ಗ್ರಾಮದ ಸರ್ವೆ ನಂಬರ್ 390 ರಿಂದ 422ರ ವರೆಗೆ ಮತ್ತು 424 ಜಮೀನುಗಳು ಮೂಲತಃ ಕೃಷ್ಣಾನಂದ ಗಿರಿ ಗೋಸ್ವಾಮಿ ಹೆಸರಿನಲ್ಲಿದೆ. ಕರ್ನಾಟಕ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದ ನಂತರ ಕೃಷ್ಣಾನಂದ ಗಿರಿ ಗೋಸ್ವಾಮಿಯವರು ಸರ್ಕಾರಕ್ಕೆ ಘೋಷಣಾ ಪತ್ರ ಸಲ್ಲಿಸಿದ್ದರು. ಅದರನ್ವಯ ಅವರ ಕುಟುಂಬಕ್ಕೆ ಜಮೀನು ನಿಗದಿ ಪಡಿಸುವ ಸಂಬಂಧ ಪ್ರಕರಣ ಭೂ ನ್ಯಾಯ ಮಂಡಳಿಯಲ್ಲಿ ದಾಖಲಾಗಿತ್ತು.