ಮೈಸೂರು: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಡಿಯೋ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರು ಯಾಕೆ ಸ್ಪಷ್ಟನೆ ನೀಡುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದರು. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಜನಾದೇಶ ಬರಲ್ಲ. ಆಪರೇಷನ್ ಕಮಲದ ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ 20ಕ್ಕೂ ಹೆಚ್ಚು ಮಂದಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ತೀವಿ ಎಂದು ಯೋಗೇಶ್ವರ್ ವೈರಲ್ ಆದ ಆಡಿಯೋದಲ್ಲಿ ಹೇಳಿದ್ದಾರೆ. ಆದರೆ, ಇಲ್ಲಿಯವರೆಗೂ ಬಿಜೆಪಿ ನಾಯಕರು ಯಾಕೆ ಆಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ' ಎಂದು ಪ್ರಶ್ನಿಸಿದರು.
ಅಮಿತ್ ಶಾ ತಿಹಾರ್ ಜೈಲಿನಲ್ಲಿದ್ದರು. ಸಕ್ರಿಯ ರಾಜಕಾರಣಿಯಾಗುವ ಮುನ್ನ ಆತ ರೌಡಿಶೀಟರ್ ಆಗಿದ್ದವರು ಎಂದು ಸಿ.ಪಿ.ಯೋಗೇಶ್ವರ್ ಅವರೇ ಆಡಿಯೋದಲ್ಲಿ ಸತ್ಯ ಹೇಳಿದ್ದಾರೆ. ಚುನಾವಣೆಗೆ ಮುಂಚಿತವಾಗಿ ಆಪರೇಷನ್ ಕಮಲ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಚುನಾವಣಾ ಆಯೋಗ ಈ ಬಗ್ಗೆ ಗಮನವಹಿಸಬೇಕು. ಬಿಜೆಪಿ ನಾಯಕರ ವಿರುದ್ಧ ಸೊಮೊಟೊ ಕೇಸ್ ದಾಖಲಿಸಬೇಕು ಎಂದರು. ಯೋಗೇಶ್ವರ್‌ರಿಂದ ಬಿಜೆಪಿ ಆಂತರಿಕ ಸರ್ವೇ ಬಹಿರಂಗವಾಗಿದೆ.
ಹಳೇ ಮೈಸೂರು ಭಾಗದಲ್ಲಿ 20 ಮಂದಿ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಈ ಪೈಕಿ ಮೈಸೂರಿನಲ್ಲೊಬ್ಬ ಹಾಗೂ ಕೋಲಾರದಲ್ಲೊಬ್ಬ ಕಾಂಗ್ರೆಸ್ ಮುಖಂಡ ಬಿಜೆಪಿ ಸೇರುತ್ತಾರೆ ಎಂದು ಯೋಗೇಶ್ವರ್ ಹೇಳಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್ ಶಾಸಕ ಸಾರಾ ಮಹೇಶ್, ಅಶ್ವಿನ್ ಕುಮಾರ್ ಜೊತೆ 20 ಮಂದಿ ಸೋಲುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ವೇಯ ನಿಜವನ್ನು ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ ಎಂದು ಹೇಳಿದರು.