ಮೈಸೂರು:ನವೆಂಬರ್ 17ರಿಂದ ಅಂತಿಮ ವರ್ಷದ ಡಿಗ್ರಿ ಹಾಗೂ ಅಂತಿಮ ವರ್ಷದ ಸ್ನಾತಕೋತ್ತರ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ತರಗತಿಗೆ ಹಾಜರಾಗುವ ಅವಕಾಶ ಇರುತ್ತದೆ ಎಂದು ಮೈಸೂರು ವಿವಿಯ ಕುಲಸಚಿವ ಶಿವಪ್ಪ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ನವೆಂಬರ್ 17ರಿಂದ ಮೈಸೂರು ವಿವಿ ವ್ಯಾಪ್ತಿಯಲ್ಲಿ ಬರುವ 231 ಡಿಗ್ರಿ ಕಾಲೇಜುಗಳಲ್ಲಿ ಅಂತಿಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿವೆ. ತರಗತಿಗೆ ಬರುವ ಮುನ್ನ ಕೋವಿಡ್ ಟೆಸ್ಟ್ ವರದಿ ತರಬೇಕು. ನೆಗೆಟಿವ್ ಇದ್ದರೆ ಮಾತ್ರ ತರಗತಿಗೆ ಪ್ರವೇಶವಿದ್ದು, ಇದರ ಜೊತೆಗೆ ತಂದೆ-ತಾಯಿಗಳಿಂದ ಒಪ್ಪಿಗೆ ಪತ್ರವನ್ನು ಸಹ ತರಬೇಕು. ಈ ಬಗ್ಗೆ ಈಗಾಗಲೇ ಕಾಲೇಜಿನ ಪ್ರಾಂಶುಪಾಲರನ್ನು ಕರೆಸಿ ತಿಳಿಸಲಾಗಿದೆ.