ಕರ್ನಾಟಕ

karnataka

ETV Bharat / state

ಯೋಗದಿನದಲ್ಲಿ ಭಾಗವಹಿಸಲು‌ ಕೊರೊನಾ ನೆಗೆಟಿವ್ ರಿಪೋರ್ಟ್ ಅಗತ್ಯ: ಎಸ್.ಟಿ.ಸೋಮಶೇಖರ್ - negative report is compulsary for partipipants of yoga day

ಮೈಸೂರಿನ ಅರಮನೆ ಆವರಣದಲ್ಲಿ ನಡೆಯಲಿರುವ ವಿಶ್ವಯೋಗ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು, ಯೋಗ ದಿನದಂದು ಭಾಗವಹಿಸುವವರು ಎರಡು ಡೋಸ್ ಲಸಿಕೆ ತೆಗೆದುಕೊಂಡಿರಬೇಕು ಅಥವಾ 72 ಗಂಟೆ ಮುಂಚಿನ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

covid-negative-report-is-compulsary-for-partipipants-of-yoga-day
ಯೋಗದಿನದಲ್ಲಿ ಭಾಗವಹಿಸಲು‌ ಕೊರೊನಾ ನೆಗೆಟಿವ್ ರಿಪೋರ್ಟ್ ಅಗತ್ಯ : ಎಸ್.ಟಿ.ಸೋಮಶೇಖರ್

By

Published : Jun 14, 2022, 9:48 PM IST

ಮೈಸೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ವಿಶ್ವ ಯೋಗ ದಿನ ಕಾರ್ಯಕ್ರಮವು ಮೈಸೂರಿನ ಅರಮನೆ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 15 ಸಾವಿರ ಜನ ಪಾಲ್ಗೊಳ್ಳಲಿದ್ದು 12 ಸಾವಿರ ಜನರ ನೋಂದಣಿಯಾಗಿದೆ ಎಂದು ಸಚಿವ‌ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಯೋಗ ದಿನಾಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವೇ ಈ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮ್ಯಾಟ್, ಮೊಬೈಲ್ ಪೌಚ್, ಶೂ ಬ್ಯಾಗ್ ವಿತರಣೆ ಮಾಡಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಎರಡು ಡೋಸ್ ಲಸಿಕೆ ತೆಗೆದುಕೊಂಡಿರಬೇಕು ಅಥವಾ 72 ಗಂಟೆ ಮುಂಚಿನ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಕೇಂದ್ರ ಸರ್ಕಾರದ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲನೆ ಮಾಡಲಿದೆ ಎಂದು ಮಾಹಿತಿ ನೀಡಿದರು.

ಯೋಗದಲ್ಲಿ ಪಾಲ್ಗೊಳ್ಳುವವರಿಗೆ ರಾಜ್ಯ ಸರ್ಕಾರದ ವತಿಯಿಂದ ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಬೆಳಗ್ಗೆ 5.30 ಗಂಟೆಗೆ ಎಲ್ಲಾ ಗೇಟ್ ಗಳು ಬಂದ್ ಆಗಲಿದೆ. ಜೂನ್ 19ರಂದು ಅಂತಿಮ ಹಂತದ ತಾಲೀಮು ನಡೆಸಲಾಗುತ್ತದೆ. ಭದ್ರತೆ ಸಂಬಂಧ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ ಎಂದು ಹೇಳಿದರು.

ಆರೋಗ್ಯ ಸಚಿವರಾದ ಡಾ. ಸುಧಾಕರ್ ಮಾತನಾಡಿ, ವಿಶ್ವ ಯೋಗ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯ. ಕಾರ್ಯಕ್ರಮದ ಸಿದ್ಧತೆಗಳ ಪರಾಮರ್ಶೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿರಲಿದ್ದಾರೆ. ಯೋಗ ಕಾರ್ಯಕ್ರಮಕ್ಕೂ ಮುನ್ನ ಮತ್ತು ನಂತರ ಸ್ವಚ್ಚತೆ ಕಾಪಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. 'ಮಾನವತ್ವ ಉಳಿವಿಗಾಗಿ ಯೋಗ' ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೈಸೂರು ಪೊಲೀಸ್ ಕಮಿಷನರ್ ಚಂದ್ರಗುಪ್ತ, ಎಸ್ ಪಿ ಚೇತನ್, ಜಿಪಂ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ:ಮೇಕೆದಾಟು, ಕಾವೇರಿ ವಿಚಾರದಲ್ಲಿ ತಮಿಳುನಾಡು ತಕರಾರು: ಸಚಿವ ಕಾರಜೋಳ

ABOUT THE AUTHOR

...view details