ಮೈಸೂರು: ನಗರದ ಸಾತಗಳ್ಳಿ ಬಸ್ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿ ನಾಪತ್ತೆಯಾಗಿದ್ದ ದಂಪತಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾತಗಳ್ಳಿ ಬಸ್ ನಿಲ್ದಾಣದ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡು ಎರಡು ವರ್ಷಗಳಿಂದ ಬಾಡಿಗೆ ಕಟ್ಟದ ಹಿನ್ನೆಲೆ ಡಿ.10ರಂದು ಬೆಳಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬಾಡಿಗೆದಾರರನ್ನು ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ಬಾಡಿಗೆ ಪಡೆದುಕೊಂಡಿದ್ದ ಕಾಂಗ್ರೆಸ್ ಮುಖಂಡ ಶಫೀಕ್ ಅಹಮ್ಮದ್ ಮತ್ತು ಅವರ ಪತ್ನಿ ಸೈಯದ್ ಮುನಿಬುನ್ನಿಸಾ ಸೇರಿದಂತೆ ಮೂವರು ಮಹಿಳೆಯರು ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಲ್ಲದೇ, ಸೈಯದ್ ಮುನಿಬುನ್ನಿಸಾ ಮಚ್ಚು ಹಿಡಿದು ಕೊಲೆ ಬೆದರಿಕೆ ಹಾಕಿ ನಾಪತ್ತೆಯಾಗಿದ್ದರು. ಈ ಸಂಬಂಧ ಕೆಎಸ್‌ಆರ್‌ಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಮರಿಗೌಡ ಉದಯಗಿರಿ ಪೊಲೀಸರಿಗೆ ದೂರು ನೀಡಿದ್ದರು ಎಂದು ಹೇಳಿದರು.
ಘಟನಾ ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಖಾಕಿ ಸಮವಸ್ತ್ರ ಧರಿಸಿದ್ದರಿಂದ ಪೊಲೀಸರ ಸಮ್ಮುಖದಲ್ಲೇ ಕೊಲೆ ಬೆದರಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ವಿಡಿಯೋ ತುಣುಕಗಳನ್ನು ನೋಡಿ ಭಾವಿಸಿದ್ದರು. ಬಳಿಕ ಡಿ.12ರಂದು ದೂರುದಾರರು ಘಟನೆಯ ವಿಡಿಯೋ ಚಿತ್ರಿಕರಣವನ್ನು ಪೊಲೀಸರಿಗೆ ನೀಡಿದ್ದರು. ಶುಕ್ರವಾರ ಮುಂಜಾನೆ ವಿರಾಜಪೇಟೆಯ ಗ್ರಾಮವೊಂದರಲ್ಲಿ ಆರೋಪಿ ದಂಪತಿ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ಬಂಧಿಸಲಾಗಿದೆ. ಜತೆಗೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರಿಬ್ಬರ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ. ಉಳಿದ ಮೂವರು ಆರೋಪಿಗಳು ಬಂಧಿತರ ಸಂಬಂಧಿಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.