ಕರ್ನಾಟಕ

karnataka

ETV Bharat / state

ನಾಳೆಯಿಂದ ನಾಡಹಬ್ಬ..ಮೈಸೂರು ದಸರಾದಲ್ಲಿ ಏನೇನು ವಿಶೇಷ.. ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆ ನಾಡಹಬ್ಬ ಆರಂಭವಾಗಲಿದ್ದು, ನಾಡಿನ ಜನರು ತುಂಬಾ ಕೌತುಕದಿಂದ ಚಾಮುಂಡಿಯ ದರ್ಶನ ಪಡೆಯಲು ಮುಂದಾಗಿದ್ದಾರೆ. ಇನ್ನು ಕೆಲವು ಕೊರೊನಾ ನೀತಿ ನಿಯಮಗಳೊಂದಿಗೆ ಈ ಬಾರಿಯ ದಸರಾ ನಡೆಯಲಿದೆ.

Countdown For My suru Dasara
ನಾಳೆಯಿಂದ ನಾಡಹಬ್ಬ

By

Published : Oct 6, 2021, 7:48 PM IST

Updated : Oct 6, 2021, 8:03 PM IST

ಮೈಸೂರು: ಇಡೀ ರಾಷ್ಟ್ರವೇ ತೀವ್ರ ಕುತೂಹಲದಿಂದ ಕಾಯುತ್ತಿರುವ ಮೈಸೂರು ದಸರಾಕ್ಕೆ ನಾಳೆ ಚಾಲನೆ ನೀಡಲಾಗುತ್ತದೆ. ಈ ಹಿನ್ನೆಲೆ ಗಣ್ಯಾತಿ ಗಣ್ಯರು ಇಂದು ಮೈಸೂರಿಗೆ ಆಗಮಿಸಿದ್ದಾರೆ. ಜೊತೆಗೆ ಸಂಬಂಧಿಸಿದ ಸಚಿವರು ಶಾಸಕರು ಹಾಗೂ ಸಚಿವರು ಪರಿಶೀಲನೆ ನಡೆಸಿದ್ದು, ಎಲ್ಲರೂ ನಾಳೆಯ ಕುತೂಹಲದ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ಸಿಂಹಾಸನ

ಬೆಳಗ್ಗೆ 8. 15 ರಿಂದ 8.45 ರೊಳಗಿನ ಶುಭ ತುಲಾ ಲಗ್ನದಲ್ಲಿ ಬೆಳ್ಳಿಯ ರಥದಲ್ಲಿರುವ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಚಾಲನೆ ನೀಡಲಾಗುವುದು. ಈ ಬಾರಿ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾಗವಹಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಅದೇ ದಿನ ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ನಂತರ ಸಂಜೆ 7.30 ಕ್ಕೆ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ಕರುನಾಡ ವೈಭವ ನೃತ್ಯ ರೂಪಕ ನಡೆಯಲಿದೆ. ಉಳಿದಂತೆ ಅಕ್ಟೋಬರ್ ೧೩ ರವರೆಗೆ ಸಂಜೆ 6 ಗಂಟೆಯಿಂದ ರಾತ್ರಿ 9.30 ರವರೆಗೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಅರಮನೆ

ಇನ್ನು ನಾಳೆಯಿಂದ ಏನೇನು ನಡೆಯಲಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ:

ಶರನ್ನವರಾತ್ರಿಗೆ ಅರಮನೆ ಸಂಪೂರ್ಣ ಸಿದ್ದಗೊಂಡಿದ್ದು, ರಾಜಮನೆತನದವರು 10 ದಿನಗಳ ಕಾಲ ನಡೆಸುವ ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿಯ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ.

ಅಕ್ಟೋಬರ್ 7 ರಂದು ಮೊದಲ ದಿನದ ಖಾಸಗಿ ದರ್ಬಾರ್:

ನವರಾತ್ರಿಯ ಮೊದಲ ದಿನವಾದ ಅಕ್ಟೋಬರ್ 7 ರಂದು ಮುಂಜಾನೆ 4.30 ರಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಜರುಗಲಿದ್ದು, ಬೆಳಗ್ಗೆ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತ್ರ ಮಾಡಿಸಲಾಗುವುದು.

ಚಾಮುಂಡಿ ಬೆಟ್ಟ

ನಂತರ ಬೆಳಗ್ಗೆ 6 ರಿಂದ 6.11 ರವರೆಗಿನ ಕನ್ಯಾ ಲಗ್ನದಲ್ಲಿ ದರ್ಬಾರ್ ಹಾಲ್ ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ ವಜ್ರಖಚಿತ ಸಿಂಹದ ತಲೆ ಜೋಡಣೆ ಮಾಡಲಾಗುತ್ತದೆ. ಬಳಿಕ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬೆಳಿಗ್ಗೆ 7.45 ರಿಂದ 8.55 ರ ತುಲಾ ಲಗ್ನದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಅವರಿಗೆ ಕಂಕಣಧಾರಣೆ ಮಾಡಲಾಗುವುದು.

ಖಾಸಗಿ ದರ್ಬಾರ್​

ವಾಣಿವಿಲಾಸ ದೇವರ ಮನೆಯಲ್ಲಿ ತ್ರಿಶಿಕ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 11.45 ರಿಂದ 12.15 ರ ನಡುವಿನ ಧನುರ್ ಲಗ್ನದಲ್ಲಿ ಯದುವೀರ್ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅರಮನೆಯ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಹೋಗಿ ಬಿಜಯ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅಕ್ಟೋಬರ್ 14 ರವರೆಗೆ ಖಾಸಗಿ ದರ್ಬಾರ್ ಜರುಗಲಿದೆ.

ಪರಿಶೀಲನೆ

ಅಕ್ಟೋಬರ್ 12 ರಂದು ಸರಸ್ವತಿ ಪೂಜೆ:

ಅಶ್ವಯುಜಾಸ ಶುಕ್ಲಪಕ್ಷದ ಸಪ್ತಮಿ ದಿನವಾದ ಅಕ್ಟೋಬರ್ 12 ರಂದು ಬೆಳಗ್ಗೆ 10.57 ರಿಂದ 11.05 ರವರೆಗೆ ಸಲ್ಲುವ ಧನುರ್ ಶುಭ ಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ವೀಣೆ, ವಿವಿಧ ಗ್ರಂಥಗಳನ್ನಿರಿಸಿ ಯದುವೀರ್ ಸರಸ್ವತಿ ಪೂಜೆ ನೆರೆವೇರಿಸಲಿದ್ದಾರೆ‌. ಅದೇ ದಿನ ಸಂಜೆ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ನೆರವೇರಲಿದೆ. ಅಕ್ಟೋಬರ್ 13 ರಂದು ಬುಧವಾರ ದುರ್ಗಾಷ್ಟಮಿ ನೆರವೇರಲಿದೆ.

ಆಯುಧ ಪೂಜೆ ವಿಧಿ ವಿಧಾನ:

ಅಕ್ಟೋಬರ್ 14 ರಂದು ಬೆಳಗ್ಗೆ 6 ರಿಂದ ಹೋಮದ ಕೊಠಡಿಯಲ್ಲಿ ಚಂಡೀ ಹೋಮ ನಡೆಯಲಿದ್ದು, ಬೆಳಗ್ಗೆ 7.45 ರಿಂದ 8 ರವರೆಗೆ ತುಲಾ ಲಗ್ನದಲ್ಲಿ ಆಯುಧ ಪೂಜೆ ನಡೆಯಲಿದೆ. ಖಾಸ್ ಆಯುಧಗಳು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಡೆಗೆ ಕರೆದೊಯ್ಯಲಾಗುತ್ತದೆ. ಬೆಳಗ್ಗೆ 8.25 ರಿಂದ 8.40ರೊಳಗೆ ಆಯುಧ ಮತ್ತು ಪಟ್ಟದ ಆನರ ಕಲ್ಯಾಣ ಮಂಟಪದ ಹೆಬ್ಬಾಗಿಲಿಗೆ ಪ್ರವೇಶಿಸುತ್ತವೆ.

9 ಗಂಟೆಗೆ ಚಂಡೀಹೋಮದ ಪೂರ್ಣಾಹುತಿ ನೆರವೇರಲಿದ್ದು, 11.02 ರಿಂದ 11.22 ರವರೆಗೆ ಧನುರ್ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಅಂದು ಸಂಜೆ ಖಾಸಗಿ ದರ್ಬಾರ್ ನೆರವೇರಿದ ಬಳಿಕ ದರ್ಬಾರ್ ಹಾಲ್ ನಲ್ಲಿ ಸಿಂಹಾಸನದಿಂದ ಸಿಂಹದ ತಲೆಯನ್ನು ವಿಸರ್ಜಿಸಲಾಗುತ್ತದೆ. ಬಳಿಕ ದೇವರ ಮನೆಯಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣ ವಿಸರ್ಜಿಸಿದರೆ, ವಾಣಿವಿಲಾಸ ದೇವರ ಅರಮನೆಯಲ್ಲಿ ತ್ರಿಶಿಕ ಕುಮಾರಿ ಒಡೆಯರ್ ಅವರು ಕಂಕಣ ವಿಸರ್ಜಿಸಲಿದ್ದಾರೆ.

ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​

ಅಕ್ಟೋಬರ್ 15 ರಂದು ಜಂಬೂಸವಾರಿ:

ಅಕ್ಟೋಬರ್ 15 ರಂದು ದಸರೆಯ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿರುವ ಜಂಬೂಸವಾರಿ ನಡೆಯಲಿದ್ದು, ಅರಮನೆ ಬಲರಾಮ ದ್ವಾರದಲ್ಲಿ ಅಂದು ಸಂಜೆ 4.36 ರಿಂದ 4.46ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಂದಿಧ್ವಜ ಪೂಜೆ ಸಲ್ಲಿಸಲಾಗುವುದು.

ನಂತರ ಅರಮನೆ ಒಳ ಆವರಣದಲ್ಲಿ ಸಂಜೆ 5 ರಿಂದ 5.30 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಇತರ ಗಣ್ಯರು ದಸರಾ ಜಂಬೂಸವಾರಿಯ ಮೆರವಣಿಗೆಗೆ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ‌ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಸ್.ಎ.ರಾಮದಾಸ್ ವಹಿಸಲಿದ್ದಾರೆ.

ಎಂ.ಕೃಷ್ಣ ಅವರಿಗೆ ಸಾಂಪ್ರದಾಯಿಕ ಸ್ವಾಗತ :

ದಸರಾ ಉದ್ಘಾಟನೆಗೆ ಆಗಮಿಸಿದ ಎಸ್.ಎಂ.ಕೃಷ್ಣ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ನಾಡಹಬ್ಬ ದಸರಾ ಉದ್ಘಾಟನೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದಾಗ ಅವರನ್ನು ಕೊಲಂಬಿಯಾ ಏಷಿಯಾ ರಸ್ತೆಯ ಸಿಗ್ನಲ್ ಬಳಿ ಸಾಂಪ್ರದಾಯಿಕವಾಗಿ ಸ್ವಾಗತವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ನೀಡಿ, ಅವರನ್ನು ಬರಮಾಡಿಕೊಂಡರು.

Last Updated : Oct 6, 2021, 8:03 PM IST

ABOUT THE AUTHOR

...view details