ಮೈಸೂರು: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆನೇ ಭ್ರಷ್ಟಾಚಾರ, ಮತ್ತು ಅಕ್ರಮಗಳು ಹೆಚ್ಚಾಗಿವೆ. ಸರ್ಕಾರದ ಗಮನಕ್ಕೆ ಬಾರದೆ ಭ್ರಷ್ಟಾಚಾರ ನಡೆಯಲು ಸಾಧ್ಯನಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತಿ.ನರಸೀಪುರ ತಾಲೂಕಿನ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲೂ ಪಿಎಸ್‌ಐ ನೇಮಕಾತಿ ಆಯ್ತು. ಬೇರೆ-ಬೇರೆ ನೇಮಕಾತಿಗಳಾದವು. ಆಗೆಲ್ಲ ಇಂತಹ ಭ್ರಷ್ಟಾಚಾರ ನಡೆದಿತ್ತಾ?. ಈಗ ನಡೆದಿರುವ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೂ ಸೆಕೆಂಡ್ ಕೂಡ ತಮ್ಮ ಸ್ಥಾನದಲ್ಲಿ ಮುಂದುವರೆಯಬಾರದು. ನೈತಿಕತೆ ಇದ್ದರೆ ಸಿಎಂ ಬೊಮ್ಮಾಯಿ ಅವರು ರಾಜೀನಾಮೆ ಪಡೆಯಬೇಕು ಆಗ್ರಹಿಸಿದರು.
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನವಾದ ಕೂಡಲೇ ಪರೀಕ್ಷೆ ರದ್ದು ವಿಚಾರವಾಗಿ ಮಾತನಾಡಿ, ಬಂಧಿತ ದಿವ್ಯಾ ಸತ್ಯ ಹೇಳಲೇಬೇಕಲ್ವ?. ಬೇರೆ ಯಾರ್ಯಾರು ಇದ್ದಾರೆ. ಯಾರಿಂದ ಪೇಪರ್ ಲೀಕ್ ಆಯ್ತು ಅಂತ ಗೊತ್ತಾಗಬೇಕಲ್ವ?. ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡುವ ಅಗತ್ಯವಿರಲಿಲ್ಲ. ನಿಮ್ಮ ಬಳಿ ಏನ್ ದಾಖಲೆ ಇದಾವೆ ಕೊಡಿ ಅಂತ ಕೇಳಬಹುದಿತ್ತು. ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಬೇಕು. ಅದನ್ನ ಬಿಟ್ಟು ನೋಟಿಸ್ ಯಾಕೆ ಕೊಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮತ್ತೆ ಪರೀಕ್ಷೆ ಮಾಡಬೇಕು:ಪಿಎಸ್‌ಐ ಅಕ್ರಮ ನೇಮಕಾತಿ ಪಾಲ್ಗೊಂಡವರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಪರೀಕ್ಷೆ ರದ್ದು ಮಾಡಿರುವುದು ಸರಿ. ಮತ್ತೆ ಮರು ಪರೀಕ್ಷೆ ಮಾಡಬೇಕೆಂದೂ ಸಿದ್ದರಾಮಯ್ಯ ಒತ್ತಾಯಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂಬ ಸಚಿವ ಆರ್.ಅಶೋಕ್‌ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಇದ್ದಾಗ ಬಿಜೆಪಿ ಪ್ರತಿಪಕ್ಷದಲ್ಲಿತ್ತು. ಆಗ ಯಾಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ. ಆಗ ಅಶೋಕ್ ಬಾಯಿಗೆ ಕಡುಬ ಹಾಕಿಕೊಂಡಿದ್ನ ಎಂದು ಗರಂ ಆದರು.