ಮೈಸೂರು:ನಗರದ ವಿವಾಹ ಕಾರ್ಯಕ್ರಮವೊಂದಕ್ಕೆ ಕೊರೊನಾ ಸಂದರ್ಭದಲ್ಲಿ ಅತಿ ಮುಖ್ಯ ಪಾತ್ರ ವಹಿಸಿರುವ ಕೊರೊನಾ ವಾರಿಯರ್ಸ್ಗೆ ಆಮಂತ್ರಣ ನೀಡಲಾಗಿದೆ.
ವಿವಾಹಕ್ಕೆ ಕೊರೊನಾ ವಾರಿಯರ್ಸ್ ಮುಖ್ಯ ಅತಿಥಿಗಳು ನಾಳೆ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಜಿ.ಎಲ್.ಎನ್ ಕನ್ವೆನ್ಷನ್ ಹಾಲ್ನಲ್ಲಿ ರಶ್ಮಿ ಹಾಗೂ ನವೀನ್ ಎಂಬುವವರ ವಿವಾಹ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ 108 ಜನ ಕೊರೊನಾ ವಾರಿಯರ್ಗಳನ್ನು ಆಹ್ವಾನಿಸಲಾಗದೆ. ಅವರೇ ವಿವಾಹದ ಮುಖ್ಯ ಅತಿಥಿಗಳಾಗಿದ್ದು, ಕಾರ್ಯಕ್ರಮದಲ್ಲಿ ಅವರಿಗೆ ಮೊದಲು ಸನ್ಮಾನ ಮಾಡಲಾಗುತ್ತದೆ.
15 ಮಂದಿ ಪೌರಕಾರ್ಮಿಕರು, 3 ಅಂಗನವಾಡಿ ಕಾರ್ಯಕರ್ತೆರು, 6 ಮಂದಿ ಆಶಾ ಕಾರ್ಯಕರ್ತೆರು, 2 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, 5 ಅಂಚೆ ಇಲಾಖೆ ಸಿಬ್ಬಂದಿ, 11 ಮಂದಿ ಶುಶ್ರೂಷಕರು, 26 ಮಂದಿ ವೈದ್ಯಕೀಯ ಸಿಬ್ಬಂದಿ, 32 ಪೊಲೀಸರು ಹಾಗೂ 11 ಮಂದಿ ಮಾಧ್ಯಮದವರನ್ನು ವಿವಾಹಕ್ಕೆ ಆಹ್ವಾನಿಸಲಾಗಿದೆ. ನಾಳೆ ನಡೆಯುವ ಕಾರ್ಯಕ್ರಮಕ್ಕೆ ಇವರೇ ಮುಖ್ಯ ಅತಿಥಿಗಳಾಗಿದ್ದಾರೆ.
ವಧು ರಶ್ಮಿ ಮಾತನಾಡಿ, ಕೊರೊನಾ ವಾರಿಯರ್ಸ್ ಆಶೀರ್ವಾದ ಸ್ವತಃ ದೇವರೇ ಬಂದು ಹರಸಿದಂತೆ. ಅದಕ್ಕೆ ಸರಿ ಸಮಾನವಾದ ಮತ್ತೊಂದು ಹಾರೈಕೆ ಇಲ್ಲ ಎಂದುಕೊಂಡಿದ್ದೇನೆ. ಅವರೇ ನಮ್ಮ ಬಂಧು-ಬಳಗ. ಎಲ್ಲಾ ಅವರೇ ನಿಂತು ಕಾರ್ಯಕ್ರಮ ನಡೆಸಿ ಶುಭ ಹಾರೈಸಲಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಜೊತೆಗೆ ವಧುವಿನ ತಂದೆ ನಾಗರಾಜು ಮಾತನಾಡಿ, ಕೊರೊನಾ ವಾರಿಯರ್ಸ್ ಸೇವೆಯನ್ನು ಕಣ್ಣಾರೆ ಕಂಡಿದ್ದೇನೆ. ಅವರನ್ನು ಗುರುತಿಸಿ ಗೌರವಿಸಬೇಕು. ಹಾಗಾಗಿ ಮಗಳ ಮದುವೆಯಲ್ಲಿ ಅವರನ್ನು ಮಾತ್ರ ಆಹ್ವಾನಿಸಿ ಅವರಿಗೆ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.