ಮೈಸೂರು: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ.
ಕೊರೊನಾ ಭೀತಿ: ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ ಹೌದು, ಕೆಲವು ದಿನಗಳಿಂದ ಕೇರಳ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಚ್.ಡಿ.ಕೋಟೆ ತಾಲೂಕಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪಿಸಿರುವುದರಿಂದ ಇಲ್ಲಿರುವ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ.
ಕೆಲವು ಪ್ರವಾಸಿಗರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಸಫಾರಿಗೆ ಆಗಮಿಸುತ್ತಿದ್ದರೆ, ಇನ್ನು ಕೆಲವರು ನೇರವಾಗಿ ಟಿಕೆಟ್ ಪಡೆಯಲು ಬರುತ್ತಿದ್ದರು. ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದ ಪ್ರವಾಸಿಗರು, ಈಗ ಸಲೀಸಾಗಿ ಬಂದು ಟಿಕೆಟ್ ಪಡೆಯುವಂತಾಗಿದೆ.
ಕೇರಳದಿಂದ ಬರುವ ಪ್ರವಾಸಿಗರಿಗೆ ಹೆಚ್.ಡಿ.ಕೋಟೆ ತಾಲೂಕಿನ ಬಾವಾಲಿ ಚೆಕ್ ಪೋಸ್ಟ್ನಲ್ಲಿ ಕೊರೊನಾ ವರದಿ ನೆಗೆಟಿವ್ ಇದ್ದರೆ ಮಾತ್ರ ಒಳಗೆ ಬಿಡಲಾಗುತ್ತಿದೆ. ಇದರಿಂದ ಪ್ರವಾಸಿಗರು ಇದರ ಸಹವಾಸವೇ ಬೇಡವೆಂದು ದೂರ ಉಳಿದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಳವಾಗುತ್ತಿರುವುದರಿಂದ ಸಫಾರಿ ಕೇಂದ್ರದತ್ತ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಲಾಗ್ತಿದೆ.