ಮೈಸೂರು: ಲಾಕ್ಡೌನ್ ನಂತರ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಹಿಂದೇಟು ಹಾಕುತ್ತಿದ್ದು , ಇದರಿಂದ ಹಳೆಯ ಕಾರ್ಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.
ಮೈಸೂರಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ. ಅಲ್ಲದೆ ಸಾರ್ವಜನಿಕ ಸಾರಿಗೆಗಳಾದ ಬಸ್, ಟ್ಯಾಕ್ಸಿ, ಆಟೋ ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಸಾಲ ಆದರೂ ಮಾಡಿ ಸ್ವಂತ ಹಳೆಯ ಕಾರ್ಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಕೆಗೆ ಜನರ ಹಿಂದೇಟು: ಹಳೆ ಕಾರುಗಳಿಗೆ ಬಂತು ಹೊಸ ರೇಟು ಈ ಕುರಿತು ಮಾತನಾಡಿರುವ ಹಳೆಯ ಕಾರುಗಳ ಮಾರಾಟ ಸಂಘದ ಅಧ್ಯಕ್ಷ ಇರ್ಫಾನ್ ಷರಿಫ್, ಲಾಕ್ಡೌನ್ ಮುನ್ನ ಚಿಕ್ಕ ಗಾಡಿಗಳನ್ನು ಯಾರು ಕೇಳುತ್ತಿರಲಿಲ್ಲ, ಆದರೆ ಲಾಕ್ಡೌನ್ ನಂತರ ಸಾರ್ವಜನಿಕ ಸಂಚಾರಿ ವ್ಯವಸ್ಥೆ ಬಳಕೆ ಕಡಿಮೆಯಾಗಿದೆ. ಸಾಲ ಅಥವಾ ಚಿನ್ನಾವನ್ನಾದರೂ ಮಾರಿ 5 ಲಕ್ಷ ಒಳಗಿನ ಕಾರ್ಗಳನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ ಎಂದಿದ್ದಾರೆ.
ಇವರಲ್ಲದೆ, ಮೈಸೂರು ಕಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರೆಹಮತ್ ಬೇಗ್ ಮಾತನಾಡಿ, ಲಾಕ್ಡೌನ್ ನಂತರ ಹಳೆಯ ಕಾರುಗಳು ಮಾರಾಟ ಆಗುತ್ತವಾ ಎಂಬ ಭಯ ಇತ್ತು. ಆದರೆ ಈಗ ಲಾಕ್ಡೌನ್ ನಂತರ ಜನರು ಸಣ್ಣ ಕಾರ್ಗಳನ್ನು ಕೊಳ್ಳಲು ಬರುತ್ತಿದ್ದಾರೆ, ಅಲ್ಲದೆ ಬೇಡಿಕೆ ಸಹ ಹೆಚ್ಚಿದೆ ಎಂದಿದ್ದಾರೆ.
ಒಟ್ಟಾರೆ ಕೊರೊನಾ ಎಫೆಕ್ಟ್ನಿಂದಾಗಿ ಹಳೆಯ ಕಾರುಗಳಿಗೆ ಬೇಡಿಕೆ ಹೆಚ್ಚಿದ್ದು, ಹಳೆಯ ಕಾರು ಮಾರಾಟಗಾರರು ಸಂತಸಗೊಂಡಿದ್ದಾರೆ.