ಮೈಸೂರು: ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ನಿವಾಸಿ ದುಂಡಯ್ಯ ವಿದ್ಯಾಭ್ಯಾಸಕ್ಕಾಗಿ 25 ವರ್ಷಗಳ ಹಿಂದೆ ಮೈಸೂರಿಗೆ ಬಂದಿದ್ದರು. ಹೀಗೆ ಬಂದವರು ಇಲ್ಲಿನ ಕಲಾ ಕಾಲೇಜಿನಲ್ಲಿ ವಿದ್ಯಾರ್ಜನೆ ಶುರು ಮಾಡಿದ್ರು. ಬಳಿಕ ಇಲ್ಲಿಯೇ ಉಳಿದುಕೊಂಡರು. ನಗರದ ವಿವೇಕಾನಂದನಗರದಲ್ಲಿ ಬಾಡಿಗೆ ಮನೆಯಲ್ಲಿ ಇವರ ವಾಸ. ಅನಾರೋಗ್ಯದಿಂದ ಬಳಲುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳು ಜೊತೆಗಿದ್ದಾರೆ. ಇಷ್ಟೇ ಅಲ್ಲ, ಇವರ ತಮ್ಮನ ಮಕ್ಕಳನ್ನೂ ನೋಡಿಕೊಳ್ಳುವ ಜವಾಬ್ದಾರಿಯೂ ಇವರ ರಟ್ಟೆ ಮೇಲಿದೆ. ಕೊರೊನಾದಿಂದಾಗಿ ಪತ್ನಿಗೆ ಕೆಲ ತಿಂಗಳಿನಿಂದ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ, ಕುಂಚದ ಹಿಡಿದ ಕೈ ವಿಧಿ ಇಲ್ಲದೆ ಗಾರೆ ಕೆಲಸ ಮಾಡುತ್ತಿದೆ.
ಕಳೆದ 17 ವರ್ಷಗಳಿಂದ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಈಗ ಕೊರೊನಾ ಸೋಂಕು ಇವರ ಬದುಕಿಗೆ ಹುಳಿ ಹಿಂಡಿದೆ. ಎಲ್ಲಾ ಶಾಲಾ- ಕಾಲೇಜುಗಳು ಬಂದ್ ಆಗಿವೆ. ಜೊತೆಗೆ ಈ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಸರಿಯಾದ ಸಂಬಳ ನೀಡುತ್ತಿರಲಿಲ್ಲ ಎಂದು ಇವರು ಕೆಲಸ ತ್ಯಜಿಸಿದ್ದಾರೆ. ಇದಾದ ಬಳಿಕ ನಂತರ ಪೇಂಟಿಂಗ್, ಮಾಡಲ್ಸ್‌ಗಳನ್ನು ಮಾಡಿಕೊಂಡು ಅವುಗಳ ಮಾರಾಟದಿಂದ ಕುಟುಂಬ ನಡೆಸಿಕೊಂಡು ಹೋಗುತ್ತಿದ್ದರು. ಹೀಗಿರಲು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಕೊರೊನಾದಿಂದಾಗಿ ಯಾರೂ ಇವರ ಪೇಂಟಿಂಗ್‌ಗಳನ್ನು ಖರೀದಿ ಮಾಡುತ್ತಿರಲಿಲ್ಲ. ಬದುಕು ಕಷ್ಟವಾಗ ತೊಡಗಿತು. ಆದ್ದರಿಂದ ಬದುಕಿನ ಬಂಡಿ ಸಾಗಿಸಲು ಕೆಲಸ ಹುಡುಕಿಕೊಂಡು ಹೋದಾಗ ಇವರಿಗೆ ಸಿಕ್ಕಿದ್ದು ಗಾರೆ ಕೆಲಸ.
'ಗಾರೆ ಕೆಲಸವಾದರೇನು, ಅಭಿಮಾನದಿಂದ ದುಡಿಯುತ್ತೇನೆ':
ಇವರಿಗೆ ಮಹೇಶ್ ಎಂಬ ಮೇಸ್ತ್ರಿ ಕೆಲಸ ಕೊಟ್ಟರು. ಮೊದಮೊದಲು ಗಾರೆ ಕೆಲಸ ಕಷ್ಟವಾಗಿತ್ತು. ಹೇಗೆ ಕೆಲಸ ಮಾಡಬೇಕು? ಎಂಬುದೇ ತೋಚಲಿಲ್ಲ. ಮನಸ್ಸಿಗೆ ಸ್ವಲ್ಪ ಬೇಜಾರಾಯ್ತು. ಈ ವೇಳೆ ಕಟ್ಟಡದ ಮಾಲೀಕರೊಂದಿಗೆ ನಾನು ನನ್ನ ಸಮಸ್ಯೆ ಹೇಳಿಕೊಂಡೆ. ಸರ್, ನಾನು ಶಿಕ್ಷಕನಾಗಿದ್ದೆ, ನನಗೆ ಈ ಕೆಲಸ ಗೊತ್ತಿಲ್ಲ ಎಂದೆ. ಅವರು ನನ್ನ ಕಷ್ಟ ನೋಡಿ ಒಂದು ದಿನಕ್ಕೆ 350 ರೂಪಾಯಿ ಕೂಲಿ ಹಾಗೂ ಒಂದು ಹೊತ್ತು ಊಟ ಕೊಡುವುದಾಗಿ ತಿಳಿಸಿದರು. ಹೀಗೆ ಕಳೆದ 25 ದಿನಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಯಾವ ಕೆಲಸವಾದರೂ ಅಭಿಮಾನದಿಂದ ಮಾಡುತ್ತೇನೆ. ಶಾಲೆಗಳಲ್ಲಿ ಸಿಗದ ಗೌರವ ನನಗೆ ಇಲ್ಲಿ ಸಿಗುತ್ತಿದೆ. ಗಾರೆ ಕೆಲಸ ಮಾಡುವುದನ್ನು ನನ್ನ ವಿದ್ಯಾರ್ಥಿಗಳು ನೋಡಿದ್ದಾರೆ, ನನಗೆ ಯಾವ ರೀತಿಯಲ್ಲೂ ಅವಮಾನವೆನಿಸಿಲ್ಲ.