ಮೈಸೂರು :ಕೊರೊನಾ ಸಮಯದಲ್ಲಿ ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆಅನ್ಲಾಕ್ ನಂತರವೂ ಯಥಾಸ್ಥಿತಿ ಮುಂದುವರೆದಿದ್ದು, ಜನ ಸಾಮಾನ್ಯರು ತತ್ತರಿಸಿದ್ದಾರೆ.
ಮಾರುಕಟ್ಟೆಗೆ ದಿನಸಿ ಮತ್ತು ತರಕಾರಿ ಸರಬರಾಜು ಸಮಪರ್ಕವಾಗಿ ಇಲ್ಲದ ಕಾರಣ ದಿನಸಿ ಪದಾರ್ಥಗಳ ಬೆಲೆ ಅಧಿಕವಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ರಾಗಿ, ಅಕ್ಕಿ, ಸಕ್ಕರೆ, ಎಣ್ಣೆ ಈರುಳ್ಳಿ ಬೆಲೆ ಕೂಡ ಜಾಸ್ತಿಯಾಗಿದೆ. ಈಗಲೂ ಬೆಲೆ ಬದಲಾಗಲಿಲ್ಲ ಎಂದು ಸಗಟು ವ್ಯಾಪಾರಿ ಕೆಂಪಣ್ಣ ಹೇಳಿದರು.
ಅನ್ಲಾಕ್ನಲ್ಲಿ ವ್ಯಾಪಾರ ಸಂಪೂರ್ಣ ಕೆಟ್ಟುಹೋಗಿದೆ. ಮಾರುಕಟ್ಟೆಗೆ ದಿನಸಿ ಪದಾರ್ಥಗಳು ಸರಬರಾಜು ಅಷ್ಟಕಷ್ಟೇ.. ಜನರ ಬಳಿಯೂ ದುಡ್ಡಿಲ್ಲ. ಬೆಲೆ ಹೆಚ್ಚಳ ಕಂಡಿರುವ ಕಾರಣ ದಿನಸಿ ಖರೀದಿಗೆ ಜನ ಬರುತ್ತಿಲ್ಲ ಎಂದು ಸಗಟು ವ್ಯಾಪಾರಿ ದಿನೇಶ್ ಅಳಲು ತೋಡಿಕೊಂಡರು.
ಬೆಲೆ ಏರಿಕೆ ಕುರಿತು ಸಗಟು ವ್ಯಾಪಾರಿಗಳ ಅಭಿಪ್ರಾಯ ಕೆಲ ವಸ್ತುಗಳನ್ನು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಜಾಣ ಮೌನ ತಾಳಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ನ್ಯಾಯಯುತ ಬೆಲೆಗೆ ಅಗತ್ಯ ವಸ್ತುಗಳನ್ನು ನಮಗೆ ದೊರೆಯುವಂತೆ ಮಾಡಿ ಎಂದು ಜನರು ಕೋರಿದ್ದಾರೆ.