ಮೈಸೂರು: ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ 700 ಕ್ಕೂ ಹೆಚ್ಚು ತಮಟೆ ಕಲಾವಿದರ ಶಬ್ಧವನ್ನು ಕೊರೊನಾ ಮೌನಗೊಳಿಸಿದೆ.
ಗಣಪತಿ ಹಬ್ಬಕ್ಕೆ ತಮಟೆ ಕಲಾವಿದರ ಕೈ ಕಟ್ಟಿದ ಕೊರೊನಾ
ಸದ್ದು ಗದ್ದಲ ಆಡಂಬರದೊಂದಿಗೆ ಹಬ್ಬದ ಸಂಭ್ರಮದಲ್ಲಿರುತ್ತಿದ್ದ ಜನರು, ಈ ಬಾರಿ ಕೊರೊನಾದಿಂದ ಗಣಪನನ್ನು ಮೌನವಾಗಿ ಮನೆ, ಮನ ಸೇರಿಸಿಕೊಂಡಿದ್ದಾರೆ. ತಮಟೆ ಕಲಾವಿದರಿಗೆ ವರ್ಷದಲ್ಲಿ ಈ ಹಬ್ಬದ ತಿಂಗಳು ಪೂರ್ತಿ ಆದಾಯ ತಂದುಕೊಡುತ್ತಿತ್ತು. ಈ ವರ್ಷ ಕೊರೊನಾ ಎಲ್ಲವನ್ನೂ ಕಸಿದುಕೊಂಡಿದೆ.
ತಿಂಗಳು ಪೂರ್ತಿ ಬಿಡುವಿಲ್ಲದೆ ಗಣೇಶ ಉತ್ಸವಕ್ಕೆ ನಗಾರಿ ಬಾರಿಸುತ್ತಿದ್ದ ಯುವಕರಿಗೆ ಕೊರೊನಾ ಆಘಾತ ಕೊಟ್ಟಿದೆ. ಗಣಪತಿ ಪ್ರತಿಷ್ಠಾಪನೆ, ಮೆರವಣಿಗಗಳಿಗೆ, ನಿಮಜ್ಜನದ ವೇಳೆ ನಗಾರಿ ತಂಡಕ್ಕೆ ಭಾರಿ ಡಿಮ್ಯಾಂಡ್ ಇರುತ್ತಿತ್ತು.
ಸರ್ಕಾರದ ಮಾರ್ಗಸೂಚಿಯಂತೆ ಗಣಪತಿ ಹಬ್ಬವನ್ನು ಸರಳವಾಗಿ ಭಕ್ತರು ಆಚರಿಸುತ್ತಿರುವುದರಿಂದ ಇತ್ತ ಮೋಜು ಮಸ್ತಿಗೆ ಬ್ರೇಕ್ ನೀಡಿದ ಹಿನ್ನೆಲೆ ಬ್ಯಾಂಡ್, ತಮಟೆ ಸದ್ದು ಅಡಗಿದೆ. ಕೊರೊನಾ ಸಂಕಷ್ಟಕ್ಕೀಡಾದ ನೇಕಾರರು, ಆಟೋ ಚಾಲಕರು, ಅಸಂಘಟಿತ ಕೂಲಿ ಕಾರ್ಮಿಕರಿಗೆ ಸರ್ಕಾರ ಪರಿಹಾರ ನೀಡಿದೆ. ಆದ್ರೆ ತಮಟೆ ವಾದ್ಯವನ್ನೆ ನಂಬಿ ಜೀವನ ದೂಡುತ್ತಿರುವ ಕಲಾವಿದರತ್ತ ಸರ್ಕಾರ ಚಿತ್ತ ಹರಿಸದೇ ಇರುವುದರಿಂದ ತಮಟೆ ವಾದ್ಯಕಲಾವಿದರು ಬೇಸರಗೊಂಡಿದ್ದಾರೆ. ಹಬ್ಬಹರಿದಿನಗಳ ಕಾರ್ಯಕ್ರಮವಿಲ್ಲದೆ ಕಂಗಾಲಾದ ವಾದ್ಯ ಕಲಾವಿದರು, ಹಾಗೂ ಗಣಪತಿ ಹಬ್ಬದ ಸಂದರ್ಭದಲ್ಲಿ ತಿಂಗಳ ದುಡಿಮೆಯಿಂದ ವರ್ಷದೂಡುತ್ತಿದ್ದವರ ಬದುಕು ಅತಂತ್ರವಾಗಿದೆ.