ಮೈಸೂರು : ಕೊರೊನಾ ವೈರಸ್ ಭೀತಿಯಿಂದ ಎಲ್ಲೆಡೆ ವ್ಯಾಪಾರ ವಹಿವಾಟುಗಳು ನೆಲ ಕಚ್ಚಿದ್ದರೂ ಕೂಡ ಹಾಪ್‌ಕಾಮ್ಸ್‌ನಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ.
ಕೊರೊನಾ ಆವರಿಸುವ ಮುನ್ನ ಹಾಪ್‌ಕಾಮ್ಸ್‌ನಲ್ಲಿ 50 ರಿಂದ 60 ಟನ್ ತರಕಾರಿ, 2 ಟನ್ ಹಣ್ಣು-ಹಂಪಲು ಮಾರಾಟವಾಗುತ್ತಿದ್ದವು. ಆದರೀಗ ಲಾಕ್‌ಡೌನ್ ಘೋಷಣೆಯಾದಾಗಿನಿಂದ ವಾರದಲ್ಲಿ 160 ಟನ್ ತರಕಾರಿ ಹಾಗೂ 4 ಟನ್ ಹಣ್ಣು ಹಂಪಲು ಮಾರಾಟವಾಗುತ್ತಿದೆ. ಮೈಸೂರಿನಲ್ಲಿ 41 ಹಾಪ್ಕಾಮ್ಸ್ ಸ್ಟಾಲ್‌ಗಳಿದ್ದು, ಮನೆಮನೆಗೆ ತರಕಾರಿ ಹಾಗೂ ಹಣ್ಣುಗಳನ್ನು ತಲುಪಿಸಲಾಗುತ್ತಿದೆ.
ಹಾಪ್ ಕಾಮ್ಸ್ಗಳಿಗೆ ತರಕಾರಿ ಸಾಗಿಸಲು ನಗರ ಪಾಲಿಕೆ 10 ವಾಹನಗಳನ್ನು ನೀಡಿದೆ. ಸೋಮವಾರದಿಂದ ಮತ್ತೆ 10 ವಾಹನಗಳನ್ನು ನೀಡಲಿದ್ದು, 20 ವಾಹನಗಳಲ್ಲಿ ಸರಾಗವಾಗಿ ತರಕಾರಿ ಸಾಗಿಸಲು ಅನುಕೂಲವಾಗಲಿದೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಲಿದೆ.
ಈ ಸಂಬಂಧ ಈಟಿವಿ ಭಾರತ್ನೊಂದಿಗೆ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ಕೆ.ರುದ್ರೇಶ್, ಲಾಕ್ ಡೌನ್ ನಂತರ ದಿನಗಳಿಂದ ನಮ್ಮ ಕೇಂದ್ರಗಳಲ್ಲಿ ತರಕಾರಿ ಹಾಗೂ ಹಣ್ಣುಗಳು ದುಪ್ಪಟ್ಟು ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತಿದೆ ಎಂದರು.