ಕರ್ನಾಟಕ

karnataka

By ETV Bharat Karnataka Team

Published : Dec 30, 2023, 1:31 PM IST

ETV Bharat / state

ಭೈರಪ್ಪನವರ ಕಾದಂಬರಿ ಕೃತಿಸ್ವಾಮ್ಯ ಪ್ರಕರಣ: 5 ಲಕ್ಷ ಪರಿಹಾರ ನೀಡುವಂತೆ ಕೋರ್ಟ್​ ಆದೇಶ

ಸಾಹಿತಿ ಎಸ್.ಎಲ್. ಭೈರಪ್ಪನವರ 'ವಂಶವೃಕ್ಷ' ಕಾದಂಬರಿಯನ್ನು ಅನಧಿಕೃತವಾಗಿ ಬೇರೆ ಭಾಷೆಗೆ ಅನುವಾದಿಸಿ ಪ್ರಕಟಿಸಿದ ಪ್ರಕರಣ ಸಂಬಂಧ ಪರಿಹಾರ ನೀಡುವಂತೆ ಹೈದರಾಬಾದ್​ನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನಕ್ಕೆ ಮೈಸೂರು ಕೋರ್ಟ್​ ಸೂಚಿಸಿದೆ.

SL Bhairappas
ಎಸ್.ಎಲ್.ಭೈರಪ್ಪ

ಮೈಸೂರು: ಖ್ಯಾತ ಸಾಹಿತಿ ಪದ್ಮಶ್ರೀ ಪುರಸ್ಕೃತ ಎಸ್.ಎಲ್. ಭೈರಪ್ಪ ಬರೆದ 'ವಂಶವೃಕ್ಷ' ಕಾದಂಬರಿಯನ್ನು ಅವರ ಅನುಮತಿ ಇಲ್ಲದೇ ಅನಧಿಕೃತವಾಗಿ ತೆಲುಗು ಭಾಷೆಗೆ ಅನುವಾದ ಮಾಡಿ ಪ್ರಕಟಿಸುವ ಮೂಲಕ ಕೃತಿಸ್ವಾಮ್ಯ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶಕರಾದ ವತ್ಸಲಾ ಅವರು 5.05 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದ ವಿವರ:ಸಾಹಿತಿ ಎಸ್.ಎಲ್. ಭೈರಪ್ಪ ಅವರು 1960ರಲ್ಲಿ ವಂಶವೃಕ್ಷ ಕಾದಂಬರಿ ಬರೆದು ಪ್ರಕಟಿಸಿದ್ದಾರೆ. ಇದನ್ನು ಪದವಿಯ ಪಠ್ಯವಾಗಿಯೂ ನಿಗದಿಪಡಿಸಲಾಗಿತ್ತು. ಅಲ್ಲದೇ ಈ ಕಾದಂಬರಿ ಆಧಾರಿತ ಚಲನಚಿತ್ರವೂ ನಿರ್ಮಾಣ ಆಗಿ ಉತ್ತಮ ಪ್ರದರ್ಶನ ಕಂಡಿತ್ತು. ಭೈರಪ್ಪ ಅವರು ತಮ್ಮ ಕಾದಂಬರಿಯನ್ನು ತೆಲುಗು ಭಾಷೆಗೆ ಅನುವಾದಿಸುವ ಹಕ್ಕನ್ನು ಸನಗರಂ ನಾಗಭೂಷಣಂ ಅವರಿಗೆ ಮಾತ್ರ ನೀಡಿದ್ದರು.

ಬಳಿಕ ಅವರು ಅದನ್ನು ವಂಶವೃಕ್ಷಂ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಿಸಿದ್ದರು. ಕೆಲ ವರ್ಷಗಳ ಹಿಂದೆ ಸನಗರಂ ನಾಗಭೂಷಣಂ ಅವರು ನಿಧನ ಹೊಂದಿದ್ದಾರೆ. ಅದಾದ ನಂತರ ಅನುವಾದದ ಹಕ್ಕನ್ನು ಯಾರಿಗೂ ನೀಡಿರಲಿಲ್ಲ. ಆದರೆ, ನಂತರ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ಸಂಪಾದಕಿ ವತ್ಸಲಾ ಎಂಬುವರು ವಂಶವೃಕ್ಷ ಅನುವಾದಿತ ಕೃತಿಯನ್ನು ಪ್ರಕಟಿಸಿದ್ದಾರೆ. ಅಲ್ಲದೆ, ವತ್ಸಲಾ ಅವರು ಕೃತಿಸ್ವಾಮ್ಯ ಕಾಯ್ದೆ ಉಲ್ಲಂಘಿಸಿದ್ದು, ಪರಿಹಾರ ನೀಡುವಂತೆ ಭೈರಪ್ಪ ಅವರು ಕೋರ್ಟ್​ ಮೊರೆ ಹೋಗಿದ್ದರು.

5.05 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ತೀರ್ಪು: ವಂಶವೃಕ್ಷ ಕಾದಂಬರಿ ಅನುವಾದಗೊಂಡು ಪ್ರಕಟವಾಗಿರುವುದು ತಿಳಿಯುತ್ತಿದ್ದಂತೆ, 2021ರಲ್ಲಿ ಭೈರಪ್ಪ ಅವರು ತಮ್ಮ ವಕೀಲರ ಮೂಲಕ ವತ್ಸಲಾ ಅವರಿಗೆ, ಅನಧಿಕೃತವಾಗಿ ಪ್ರಕಟಿಸಿದ ವಂಶವೃಕ್ಷಂ ಕಾದಂಬರಿಯ ಪ್ರತಿಗಳನ್ನು ತಮಗೆ ಒಪ್ಪಿಸಬೇಕು ಎಂದು ನೋಟಿಸ್ ನೀಡಿದ್ದರು. ಆದರೆ ವತ್ಸಲಾ ಅವರು ನೋಟಿಸ್​ಗೆ ಪ್ರತ್ಯುತ್ತರ ನೀಡದ ಕಾರಣ, ಭೈರಪ್ಪ ಅವರು ಮೈಸೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯದಲ್ಲಿ ಕೃತಿಸ್ವಾಮ್ಯ ಉಲ್ಲಂಘನೆ ಸಂಬಂಧ 5.05 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿ ಪ್ರಕರಣ ಹೂಡಿದ್ದರು.

ಪ್ರಕರಣದ ವಾದ, ಪ್ರತಿ ವಾದ ಆಲಿಸಿದ ಮೈಸೂರಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಅವರು ಪ್ರಿಯದರ್ಶಿನಿ ಪ್ರಚುರಣಾಲುನ ವತ್ಸಲಾ ಅವರು 5.05 ಲಕ್ಷ ರೂಪಾಯಿ ಮತ್ತು ಮುದ್ರಿತ ಎಲ್ಲ ವಂಶವೃಕ್ಷಂ ಪ್ರತಿಗಳನ್ನು ಭೈರಪ್ಪ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ. ಜೊತೆಗೆ ಈ ಕೃತಿಯನ್ನು ಮರುಮುದ್ರಣ ಮಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಎಐ ರಚಿತ ಇಮೇಜ್​ಗಳಿಗೆ ಕಾಪಿರೈಟ್​​ ಪಡೆಯುವಂತಿಲ್ಲ:ಅಮೆರಿಕ​ ಕೋರ್ಟ್​

ABOUT THE AUTHOR

...view details