ಮೈಸೂರು: ನಂಜನಗೂಡಿನ ಜುಬಿಲಂಟ್ ಔಷಧ ಕಂಪನಿ ಕೊರೊನಾ ಚಿಕಿತ್ಸೆಗಾಗಿ ಅಮೆರಿಕ ಕಂಪನಿಯೊಂದರ ಜೊತೆಗೆ ಪರಿಶೋಧನಾತ್ಮಕ ಔಷಧ ತಯಾರಿಕೆ ಹಾಗೂ ಮಾರಾಟ ಒಪ್ಪಂದ ಮಾಡಿಕೊಂಡಿದೆ.
ಜುಬಿಲಂಟ್ ಔಷಧ ಕಂಪನಿಯಲ್ಲಿ ಕೊರೊನಾ ಪ್ರಯೋಗಾತ್ಮಕ ಔಷಧಿ ತಯಾರಿಕೆಗೆ ಒಪ್ಪಂದ - corona news
ಕೊರೊನಾ ಚಿಕಿತ್ಸೆಗಾಗಿ ಅಮೆರಿಕದ ಗಿಲೀಡ್ ಕಂಪನಿ ಅಭಿವೃದ್ಧಿಪಡಿಸಿರುವ ಪರಿಶೋಧನಾತ್ಮಕ ಔಷಧ ರೆಮ್ಡೆಸಿವಿರ್ ತಯಾರಿಸಲು ಹಾಗೂ ಮಾರಾಟ ಮಾಡಲು ಅದರ ಅಂಗಸಂಸ್ಥೆಯಾದ ಜುಬಿಲಂಟ್ ಜೆನರಿಕ್ಸ್ ಫಾರ್ಮಸಿಟಿಕಲ್ ಕಂಪನಿ ಅಮೆರಿಕದ ಗಿಲೀಡ್ ಸೈನ್ಸಸ್ ಇನ್ಕ್‌ನೊಂದಿಗೆ ಪರವಾನಗಿ ಒಪ್ಪಂದ ಮಾಡಿಕೊಂಡಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಜೆನರಿಕ್ಸ್ ಫಾರ್ಮಸಿಟಿಕಲ್ ಕಾರ್ಖಾನೆಯು ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು. ಆದರೀಗ ಇದೇ ಕಾರ್ಖಾನೆಯು ಅಮೆರಿಕದ ಗಿಲೀಡ್ ಎಂಬ ಕಂಪನಿಯೊಂದಿಗೆ ಕೊರೊನಾ ಚಿಕಿತ್ಸೆಗೆ ಔಷಧ ತಯಾರಿಸಲು ಹಾಗೂ ಅದನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಸರ್ಕಾರದಿಂದ ಅಗತ್ಯ ಅನುಮೋದನೆಗಳನ್ನು ಪಡೆದ ಬಳಿಕ ಔಷಧವನ್ನು ಶೀಘ್ರವೇ ಬಿಡುಗಡೆ ಮಾಡಲು ಸಿದ್ಧರಿದ್ದೇವೆ. ಈ ರೆಮ್ಡೆಸಿವಿರ್ ಪರಿಶೋಧನಾತ್ಮಕ ಔಷಧವಾಗಿದ್ದು, ಇದು ಯು.ಎಸ್.ಎಫ್.ಡಿ.ಎನಿಂದ ಒಪ್ಪಿಗೆ ಪಡೆದಿಲ್ಲ ಎಂದು ಕಂಪೆನಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.