ಮೈಸೂರು :ಸಿರಿಧಾನ್ಯಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ಮಾನವನ ಆರೋಗ್ಯ ವೃದ್ದಿಯಾಗುತ್ತದೆ. ಬಿಪಿ, ಸಕ್ಕರೆ ಕಾಯಿಲೆ ಮುಂತಾದ ಸಮಸ್ಯೆಗಳು ಸಿರಿಧಾನ್ಯಗಳ ಬಳಕೆಯಿಂದ ನಿವಾರಣೆಯಾಗುತ್ತವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ಬುಧವಾರ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯಗಳ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯಗಳು ಒಂದು ಕಾಲದಲ್ಲಿ ಬಡವರ ಆಹಾರವಾಗಿತ್ತು. ಆದರೆ ಇಂದು ಶ್ರೀಮಂತರ ಆಹಾರವಾಗಿದೆ. ಹಾಗಾಗಿ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹೊರ ದೇಶಗಳಲ್ಲಿಯೂ ಸಿರಿ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು.
ಬೆಂಗಳೂರಿನಲ್ಲಿ ಸಿರಿಧಾನ್ಯ ಮೇಳ:ವಿಶ್ವಸಂಸ್ಥೆಯಲ್ಲಿ 77 ದೇಶಗಳು ಒಪ್ಪಿಗೆ ನೀಡಿ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಗಿದೆ. ಜನವರಿ 20, 21 ಮತ್ತು 23 ರಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ಮೇಳವನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಗಳಲ್ಲಿ ಸಿರಿಧಾನ್ಯಗಳ ಮೇಳ ನಡೆಯುತ್ತಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಕೃಷಿ ಲಾಭದಾಯಕವಾದ ಉದ್ಯೋಗವಾಗಿದ್ದು ಖುಷಿಯಿಂದ ಮಾಡಬೇಕು. ಲಾಭದಾಯಕ ಎಂಬುದನ್ನು ಮನವರಿಕೆ ಮಾಡಲು ಪ್ರಗತಿಪರ ರೈತರನ್ನು ಕರೆಸಿ ಅವರಿಂದ ಮಾಹಿತಿಯನ್ನು ಕೊಡಿಸಲಾಗುತ್ತಿದೆ. ವ್ಯವಸ್ಥಿತವಾಗಿ ಕೃಷಿ ಮಾಡಿದರೆ ಲಾಭ ಗಳಿಸಬಹುದು ಎಂದು ಸಚಿವರು ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 38 ಕೋಟಿ ಜನಸಂಖ್ಯೆ ಇತ್ತು. 1968ರಲ್ಲಿ ಹಸಿರು ಕ್ರಾಂತಿ ಆಗುವವರೆಗೆ ಆಹಾರ ಕೊರತೆ ಇತ್ತು. ಇಂದು 138 ಕೋಟಿ ಜನಸಂಖ್ಯೆ ಇದ್ದರೂ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ ಎಂದರು.
ಸಿರಿ ಧಾನ್ಯಗಳ ಮಾಹಿತಿ ಒಳಗೊಂಡ ಕೈಪಿಡಿಯನ್ನು ಬಿ.ಸಿ ಪಾಟೀಲ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಮಹಾಪೌರ ರೂಪ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಇದ್ದರು.