ಮೈಸೂರು: ತಿರುಪತಿಯಲ್ಲಿ 200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ಎಲ್ಲಾ ಪ್ರಕ್ರಿಯೆಯು ಪಾರದರ್ಶಕವಾಗಿದೆ. ಏನಾದರೂ ಸಮಸ್ಯೆಗಳು, ಅನುಮಾನಗಳಿದ್ದರೆ ಮುಕ್ತವಾಗಿ ಚರ್ಚೆಗೆ ಸಿದ್ದ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ತಿರುಪತಿಯಲ್ಲಿ ಕರ್ನಾಟಕ ಭವನದ ಕಾರ್ಯ ಪಾರದರ್ಶಕವಾಗಿದೆ: ಸಚಿವ ಕೋಟಾ - Kota Shreenivasa Poojari
ಕರ್ನಾಟಕದ ಭಕ್ತಾಧಿಗಳಿಗಾಗಿ ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ಎಲ್ಲಾ ಪ್ರಕ್ರಿಯೆಯು ಪಾರದರ್ಶಕವಾಗಿದೆ. ಈ ಬಗ್ಗೆ ಯಾವುದೇ ಗೊಂದಲವಿದ್ದರೆ, ಸಲಹೆಗಳಿದ್ದರೆ ಸ್ವೀಕರಿಸಿ ಗಮನ ಹರಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಚಿವರು ನಂತರ ಮಾಧ್ಯಮಗಳ ಜೊತೆ ಮಾತನಾಡಿ, ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ 200 ಕೋಟಿ ರೂ ವೆಚ್ಚದ ಕರ್ನಾಟಕ ಭವನ ನಿರ್ಮಾಣವನ್ನು ಅಲ್ಲಿಯವರೆಗೆ ನೀಡಲಾಗಿದ್ದು, ನಿರ್ವಹಣೆಗೆ 10 ಕೋಟಿ ರೂ ನೀಡಿರುವುದು ಎಲ್ಲವೂ ಪಾರದರ್ಶಕವಾಗಿದೆ. ಈ ಬಗ್ಗೆ ಮುಕ್ತ ಚರ್ಚೆಗೆ ನಾವು ಸಿದ್ದರಾಗಿದ್ದೇವೆ. ಕರ್ನಾಟಕದಿಂದ ಅತೀ ಹೆಚ್ಚು ಭಕ್ತರು ತಿರುಪತಿಗೆ ಹೋಗುತ್ತಿರುವುದರಿಂದ ವಾಸಕ್ಕೆ ಅನುಕೂಲವಾಗುವಂತೆ ದೊಡ್ಡ ಮಟ್ಟದ ವ್ಯವಸ್ಥೆ ಮಾಡಬೇಕೆಂಬ ಆಶಯದಿಂದ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಬೇಡಿಕೆಯಂತೆ ಎರಡು ಸದನದಲ್ಲಿ ಚರ್ಚೆಯಾಗಿ, ಸಚಿವ ಸಂಪುಟದಲ್ಲಿ 200 ಕೋಟಿ ವೆಚ್ಚದಲ್ಲಿ ತಿರುಪತಿ, ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡಲು ಒಪ್ಪಿಗೆ ಪಡೆದಿದ್ದು, ಇದರಲ್ಲಿ ಯಾವುದೇ ತಪ್ಪಾಗಿಲ್ಲ, ತಪ್ಪಾಗಿದ್ದರೆ ಸರಿಪಡಿಸಿ ಗೊಂದಲ ನಿವಾರಿಸೋಣ ಎಂದರು.
ಈಗಿನ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಭಕ್ತಾಧಿಗಳಿಗೆ ದಸರಾ ಸೇರಿದಂತೆ, ದೇವರ ದರ್ಶನ ಮಾಡುವವರಿಗೆ ಕೋವಿಡ್ ಗೈಡ್ ಲೈನ್ಸ್ ಅನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ರಜಾ ದಿನಗಳಂದು ಹಾಗೂ ಶುಕ್ರವಾರ ಹೆಚ್ಚು ಜನ ಬರುವುದರಿಂದ ನಿರ್ಬಂಧ ಹೇರುವ ಅನಿವಾರ್ಯತೆ ಇದೆ. ಕಾರಣ, ಯಾರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ, ಸಾರ್ವಜನಿಕರ ಹಿತದೃಷ್ಠಿಯಿಂದ ದಸರಾ ಸಂದರ್ಭದಲ್ಲಿ ಯಾವ ರೀತಿ ಗೈಡ್ ಲೈನ್ಸ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.