ಕರ್ನಾಟಕ

karnataka

ETV Bharat / state

ಮೈಸೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಫೆರಿಪರಲ್ ರಿಂಗ್ ರೋಡ್ ನಿರ್ಮಾಣ : ಸಚಿವ ಬೈರತಿ​ ಸುರೇಶ್

ಸಾಂಸ್ಕೃತಿಕ ನಗರಿಯಲ್ಲಿ ಟ್ರಾಫಿಕ್​ ತಡೆಗೆ ಹೊರವರ್ತುಲದಲ್ಲಿ ಪೆರಿಫರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ನಗರ ಯೋಜನೆ ಸಚಿವರಾದ ಬಿ.ಎಸ್​. ಸುರೇಶ್ ತಿಳಿಸಿದ್ದಾರೆ.

Project progress review meeting with B.S. Suresh
ಬಿ.ಎಸ್​. ಸುರೇಶ್​ ಅವರನ್ನೊಳಗೊಂಡ ಯೋಜನೆಯ ಪ್ರಗತಿ ಪರಿಶೀಲನಾ ಸಭೆ

By ETV Bharat Karnataka Team

Published : Nov 6, 2023, 5:49 PM IST

ಮೈಸೂರು:ಜಿಲ್ಲೆ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿನ ಟ್ರಾಫಿಕ್​ ಸಮಸ್ಯೆ ನಿವಾರಣೆಗೆ ಹೊರವರ್ತುಲದಲ್ಲಿ ಪೆರಿಫರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರಾದ ಬಿ.ಎಸ್​. ಸುರೇಶ್ ತಿಳಿಸಿದರು.

ಇಂದು ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರು ನಗರಾಭಿವದ್ಧಿ ಪ್ರಾಧಿಕಾರದಿಂದ ನಗರದ ಹೊರ ವರ್ತುಲ ರಸ್ತೆ ನಿರ್ಮಿಸುವ ಹಾಗೂ ಮೈಸೂರು - ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಫ್ಲೈ ಓವರ್ ನಿರ್ಮಿಸುವ ಕುರಿತಾದ ವಿಸ್ತೃತ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸುರೇಶ್​ ಮಾತನಾಡಿದರು.

ಬೆಂಗಳೂರು ಮೈಸೂರು ಹೈವೆಯ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ನ್ಯಾಷನಲ್​ ಹೈವೇ ಅಥಾರಿಟಿ ಆಫ್ ಇಂಡಿಯಾ ಅವರಿಂದ ಪ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದ್ದು, ನಿರ್ಮಾಣ ಕಾಮಗಾರಿ ವೈಜ್ಞಾನಿಕವಾಗಿ ನಿರ್ಮಾಣವಾಗಬೇಕು. ಮೈಸೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೆರಿಫರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಪೆರಿಫರಲ್ ರಿಂಗ್​ ರೋಡ್​ಗೆ ಭೂಮಿ ನೀಡಿದವರಿಗೆ ಆ ಜಾಗದ ಬೆಲೆಯ ಹಣ ಅಥವಾ ಬೇರೆ ಭೂಮಿ ನೀಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್​. ಸಿ. ಮಹದೇವಪ್ಪ ಮಾತನಾಡಿ ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಸರ್ವೆ ಮೂಲಕ ಗುರುತಿಸಿಕೊಳ್ಳಿ. ಇದರಲ್ಲಿ ಬೆಂಗಳೂರು ಕಡೆಯಿಂದ ಬಂದು ಟಿನರಸೀಪುರ, ಹುಣಸೂರು, ನಂಜನಗೂಡು ಕಡೆಗೆ ಹೋಗುವ ವಾಹನಗಳ ಸಂಖ್ಯೆ ತಿಳಿದರೆ ರಸ್ತೆ ಸೌಲಭ್ಯ, ಸರ್ವಿಸ್​ ರಸ್ತೆ ಕಲ್ಪಿಸಲು ಅನುಕೂಲವಾಗುತ್ತದೆ.

ಮೈಸೂರು ಜಿಲ್ಲೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದೆ. ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ನಿರ್ಮಾಣವಾಗುವ ರಸ್ತೆಗಳು, ಫ್ಲೈ ಓವರ್​ಗಳು ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಬೇಕು. ಗುಜರಾತ್​, ಮಹಾರಾಷ್ಟ್ರದ ಅಧಿಕಾರಿಗಳು ಮೈಸೂರು ಇನ್ಫಾಸ್ಟ್ರಕ್ಚರ್​​ ಅನ್ನು ಅಧ್ಯಯನ ಮಾಡಲು ಜಿಲ್ಲೆಗೆ ಭೇಟಿ ನೀಡಿ, ಇದನ್ನು ತಮ್ಮ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲು ವರದಿ ತಯಾರಿಸಿಕೊಳ್ಳುತ್ತಾರೆ. ನಗರದಲ್ಲಿ ಅಗತ್ಯ ಇರುವೆಡೆ ಸ್ಕೈವಾಕ್​ಗಳನ್ನು ನಿರ್ಮಿಸಲು ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಕೆ. ಹರೀಶ್​ ಗೌಡ, ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಎಂ‌.ಎನ್. ಅಜಯ್ ನಾಗಭೂಷಣ್, ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಇನ್ಮುಂದೆ ರಾಜ್ಯದೆಲ್ಲೆಡೆ ಕೃಷಿ ಪಂಪ್​ಸೆಟ್​ಗಳಿಗೆ ಏಳು ತಾಸು ನಿರಂತರ ವಿದ್ಯುತ್ ಪೂರೈಕೆ: ಸಿಎಂ ಘೋಷಣೆ

ABOUT THE AUTHOR

...view details