ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಮಾದರಿಯ ಮಾನವ ಸರಪಳಿ ಮೈಸೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು ಜಿಲ್ಲಾಡಳಿತದ ವತಿಯಿಂದ ನಗರ ಓವಲ್ ಮೈದಾನದಲ್ಲಿ ನಡೆದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾರತದ ಸಂವಿಧಾನ ಪೀಠಿಕೆ ಮಾದರಿಯ ಮಾನವ ಸರಪಳಿ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದರು. ಅದ್ಬುತ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಸಮಾನತೆಯ ಜೀವನಕ್ಕೆ ಸಂವಿಧಾನ ಅಡಿಪಾಯ. ಸಂವಿಧಾನವನ್ನು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮ ಸಮಾಜದ ನಿರ್ಮಾಣ ಮಾಡುವುದರ ಜೊತೆಗೆ ಸಮಾನತೆಯಿಂದ ಜೀವನ ನಡೆಸಬೇಕು. ಕರ್ನಾಟಕ ರಾಜ್ಯ ಸರ್ಕಾರವು ಈ ದಿನ ಸಂವಿಧಾನ ಓದು ಕಾರ್ಯಕ್ರಮವನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರಿಗೂ ಕೂಡ ಸಂವಿಧಾನದ ಅರಿವು ಮೂಡಿಸಲು ಮುಂದಾಗಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ 3 ವರ್ಷಗಳ ಕಾಲ ತಮ್ಮ ಜ್ಞಾನದ ಜೊತೆಗೆ ವಿವಿಧ ದೇಶಗಳ ಸಂವಿಧಾನದ ಎರವಲು ಪಡೆದು ರಚಿಸಿದ ಸರ್ವರು ಸಮಾನರು ಎಂಬ ಸಂವಿಧಾನದಿಂದ ಪ್ರತಿಯೊಬ್ಬರೂ ಕೂಡ ಸಮಾನತೆಯಿಂದ ಬದುಕುತ್ತಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನವು ಜಗತ್ತಿನಲ್ಲೇ ಸರ್ವ ಶ್ರೇಷ್ಠ ಪ್ರಜಾಪ್ರಭುತ್ವದ ಸಂವಿಧಾನವಾಗಿದೆ. ಸಂವಿಧಾನ ಉಳಿದರೆ ಮಾತ್ರ ಪ್ರತಿಯೊಬ್ಬರೂ ಕೂಡ ಸಮಾನತೆಯಿಂದ ಬದುಕಲು ಸಾಧ್ಯ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ನಾವೆಲ್ಲರೂ ಕೂಡ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಭವ್ಯ ಭಾರತವನ್ನು ಕಟ್ಟುವ ಪರಿಕಲ್ಪನೆಯು ನಮ್ಮ ಮುಂದೆ ಬಂದಾಗ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪ ಕೂಡ ಒಂದು ಉದಾಹರಣೆಯಾಗಿದೆ. ಸಂವಿಧಾನದ ವಿಚಾರವನ್ನು ತಿಳಿಯಲು ವಿದ್ಯಾರ್ಥಿಗಳು ಶಾಲಾ ಕಾಲೇಜಿನಲ್ಲಿನ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳಿ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಜೆ.ಸೋಮಶೇಖರ್ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಇಂದು ಹೊಸ ಚರಿತ್ರೆಗೆ ನಾಂದಿ ಹಾಡಿದೆ. ಕನ್ನಡ ನೆಲವು ಅಂದಿನಿಂದಿಲೂ ಕೂಡ ಪ್ರಜಾಸತ್ತಾತ್ಮಕ ನೆಲ ಎಂಬುದನ್ನು ನಿರೂಪಿಸುತ್ತಾ ಬಂದಿದೆ. ದೇಶದ ಇತಿಹಾಸದಲ್ಲಿ ಮೈಸೂರಿನ ಮಹಾರಾಜರು ಪ್ರಜಾಪ್ರಭುತ್ವವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯನ್ನು ಕಂಡು, ಭಾರತದಲ್ಲಿ ಪ್ರಥಮ ಬಾರಿಗೆ ಪ್ರಜಾಪ್ರಭುತ್ವ ಸಂಸ್ಥೆಯನ್ನು ಕಟ್ಟಿದರು. ಈ ನೆಲದಲ್ಲಿ ನಾವು 73 ವರ್ಷಗಳ ನಂತರ ಸಂವಿಧಾನದ ಪ್ರಸ್ತಾವನೆಯನ್ನು ಸಾರ್ವಜನಿಕವಾಗಿ ಯಾವುದೇ ಭೇದ-ಭಾವ, ಲಿಂಗ, ಜಾತಿ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಈ ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ:ಸಂವಿಧಾನ ವಿರೋಧಿ ಶಕ್ತಿಗಳಿಂದ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ